ಬೆಂಗಳೂರು, ಏಪ್ರಿಲ್ 19, 2020 (www.justkannada.in): ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಲ್ಲಿಸಲಾಯಿತು.
ಮನವಿ ಪತ್ರದ ಮುಖ್ಯಾಂಶಗಳು ಇಂತಿವೆ…
ವಿಶ್ವದ ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ (ಕೋವಿಡ್-19) ರೋಗವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಚಪ್ಪಾಳೆ ತಟ್ಟುವಿಕೆ, ದೀಪ ಬೆಳಗುವಿಕೆ ಹಾಗೂ ಲಾಕ್ಡೌನ್ ಮುಂತಾದ ಎಲ್ಲ ನಿರ್ಣಯಗಳಿಗೆ ನಾವುಗಳು ಸಹಮತವನ್ನು ತೋರುತ್ತಾ ಬಂದಿದ್ದೇವೆ.
ಆದರೆ ರೋಗ ಹರಡುವಿಕೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಏರುಮುಖವಾಗಿದೆಯೇ ಹೊರತು ನಿಯಂತ್ರಣಕ್ಕೆ ಬಂದಿರುವ ಸೂಚನೆಗಳು ಕಾಣುತ್ತಿಲ್ಲ. ಅದಕ್ಕೆ ಕಾರಣಗಳನ್ನು ಸರ್ಕಾರವೇ ತಿಳಿಸಬೇಕಾಗಿರುತ್ತದೆ. ಡಬ್ಲ್ಯೂ.ಹೆಚ್.ಓ., ಮಾರ್ಗಸೂಚಿಯ ಪ್ರಕಾರ ಕೊರೋನಾ ರೋಗ ನಿಯಂತ್ರಣಕ್ಕೆ ಪ್ರಾಥಮಿಕವಾಗಿ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ.
ಆದರೆ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಪ್ರತಿ 10 ಲಕ್ಷಕ್ಕೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಬಂದಿದೆ. ಒಂದು ಕಡೆ ಕೊರೋನಾ ರೋಗ ಪರೀಕ್ಷೆಗೆ ರ್ಯಾಪಿಡ್ ಟೆಸ್ಟ್ ಕಿಟ್ಗಳು ಹಾಗೂ ಪಿ.ಸಿ.ಆರ್. ಮೆಷಿನ್ಗಳ ಕೊರತೆಯಾದರೆ, ಮತ್ತೊಂದು ಕಡೆ ವೈದ್ಯರ, ದಾದಿಯರ ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯವಾಗಿರುವ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, ಪಿ.ಪಿ.ಇ. ಕಿಟ್ ಮುಂತಾದವುಗಳ ಕೊರತೆಯಾಗಿರುತ್ತದೆ.
ಒಟ್ಟು 12 ಲಕ್ಷ ಕಿಟ್ಗಳ ಅಗತ್ಯವಿದ್ದರೆ ಈಗ 2,27,000 ಕಿಟ್ಗಳು ಮಾತ್ರ ಲಭ್ಯವಿವೆ. ಎನ್-95 ಮಾಸ್ಕ್ಗಳು ಕೇವಲ 5,46,721 ಮಾತ್ರ ಲಭ್ಯವಿವೆ ಮತ್ತು ಹೈಡ್ರಾಕ್ಸಿ ಕ್ಲೋರಾಕ್ಸಿನ್ ಮಾತ್ರೆಗಳು ಕೇವಲ 2,79,999 ರಷ್ಟು ಲಭ್ಯವಿವೆ.
ಇತ್ತೀಚಿನವರೆಗೂ ಕೇವಲ ರಾಜೀವ್ಗಾಂಧಿ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ರಂಗದೊರೈ ಆಸ್ಪತ್ರೆ ಮತ್ತು ಆನಂದ್ ಲ್ಯಾಬ್ಗಳಲ್ಲಿ ಮಾತ್ರ ಕೊರೋನಾ ರೋಗದ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ರಾಜ್ಯದಲ್ಲಿರುವ 18 ಲ್ಯಾಬ್ಗಳಲ್ಲಿ ಕೊರೋನಾ ರೋಗದ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ.
ಇವುಗಳ ಪೈಕಿ 9 ಲ್ಯಾಬ್ಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿವೆ ಹಾಗೂ 12,500 ರ್ಯಾಪಿಡ್ ಟೆಸ್ಟ್ ಕಿಟ್ಗಳು ಬರಲಿವೆ ಎಂದು ದಿನಾಂಕ:17-4-2020 ರಂದು ಸರ್ಕಾರ ತಿಳಿಸಿರುತ್ತದೆ. ಇಲ್ಲಿಯವರೆಗೂ ನಮ್ಮ ರಾಜ್ಯಕ್ಕೆ ಕೊರೋನಾ ರೋಗ ಪತ್ತೆಗೆ ಬೇಕಾಗಿರುವ ರ್ಯಾಪಿಡ್ ಟೆಸ್ಟ್ ಕಿಟ್ಗಳು ಲಭ್ಯವಾಗಿರುದಿಲ್ಲ. ಲ್ಯಾಬ್ಗಳ ಮೂಲಕ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ 17,594 ಜನರಿಗೆ ಕೊರೋನಾ ರೋಗ ಪರೀಕ್ಷೆ ಮಾಡಲಾಗಿದೆ.
ಈ ವೈದ್ಯಕೀಯ ಸೌಲಭ್ಯಗಳು ಕೊರೋನಾ ರೋಗ ತಡೆಗೆ ಏನೇನೂ ಸಾಲದು. ಇದರಿಂದ ಕೊರೋನಾ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲವೆಂದು ಅನೇಕ ವೈದ್ಯರು, ತಜ್ಞರ ಅಭಿಪ್ರಾಯವಾಗಿರುತ್ತದೆ.
ಲಾಕ್ಡೌನ್ ಆಗಿ 25 ದಿನಗಳು ಕಳೆದಿದ್ದರೂ ಜನಸಾಮಾನ್ಯರ ಬದುಕಿಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯಾಡಳಿತ ಸಂಪೂರ್ಣ ವಿಫಲವಾಗಿದೆ. ಆ ಕಾರಣ ಜನರ ಬದುಕು ಅತ್ಯಂತ ದುಸ್ತರವಾಗಿದೆ.
ರಾಜ್ಯದ 6 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ಸಂಘಟಿತ ಕಾರ್ಮಿಕರ ಸಂಖ್ಯೆ 21 ಲಕ್ಷಗಳಿದ್ದು, ಅಸಂಘಟಿತ ಕಾರ್ಮಿಕರ ಸಂಖ್ಯೆ ಸುಮಾರು 1 ಕೋಟಿ 32 ಲಕ್ಷ ಇರುತ್ತದೆ.
ಇದಲ್ಲದೇ ಕೋಟ್ಯಾಂತರ ಕೃಷಿ ಕಾರ್ಮಿಕರು ರಾಜ್ಯದ ಉದ್ದಗಲಕ್ಕೂ ನೆಲೆಸಿದ್ದಾರೆ ಇವರಷ್ಟೇ ಅಲ್ಲದೇ ಕುಶಲಕರ್ಮಿಗಳಾದ ಸವಿತಾ ಸಮಾಜದವÀರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರು ಮುಂತಾದವರು ತಮ್ಮ ಜೀವನೋಪಾಯಕ್ಕಾಗಿ ದಿನನಿತ್ಯದ ದುಡಿಮೆಯನ್ನು ಅವಲಂಬಿಸಿ ಬದುಕುತ್ತಿದ್ದರು.
ಇವರುಗಳಿಗೆ ದುಡಿಮೆಯಿಲ್ಲದೇ ಅವರ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಗುರಿಯಾಗಿವೆ. ಅನೇಕ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಊರುಗಳಲ್ಲಿ ಜೀವನೋಪಾಯಕ್ಕೆ ದಾರಿಯಿಲ್ಲದೇ ಕಷ್ಟವನ್ನು ಅನುಭವಿಸುತ್ತಿದ್ದಾರೆ.
ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದು, ಅನೇಕರು ಕಾಲ್ನಡಿಗೆಯಲ್ಲೇ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಕೆಲವರು ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸಾವನ್ನಪ್ಪಿರುತ್ತಾರೆ.
ಸರ್ಕಾರದ ಮಾಹಿತಿಯ ಪ್ರಕಾರವೇ ಈ ವರ್ಷದ ಬೇಸಿಗೆ ಋತುವಿನಲ್ಲಿ ರಾಜ್ಯದ ಉದ್ದಗಲಕ್ಕೂ ಸುಮಾರು 64,340 ಹೆಕ್ಟೇರ್ ಪ್ರದೇಶದಲ್ಲಿ 17 ಲಕ್ಷದ 38 ಸಾವಿರ ಕ್ವಿಂಟಾಲ್ ಇಳುವರಿಯ ತರಕಾರಿ ಬೆಳೆಗಳು ಮತ್ತು 1,91,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಇಳುವರಿ ಅಂದಾಜು 32,55,969 ಟನ್ಗಳನ್ನು ನಮ್ಮ ರೈತರು ಬೆಳೆದಿದ್ದಾರೆ.
ವಿವಿಧ ರೀತಿಯ ಹೂಗಳನ್ನು ಸುಮಾರು 11,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುತ್ತಾರೆ. ಹಾಗೂ ಸುಮಾರು 1,08,168 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆದಿರುತ್ತಾರೆ. ಅದೇ ರೀತಿ ಭತ್ತ, ರಾಗಿ, ಮುಸುಕಿನ ಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಬೆಳೆಗಳನ್ನು ರೈತರು ಬೇಸಿಗೆಯಲ್ಲೂ ಬೆಳೆದಿರುತ್ತಾರೆ. ರೈತರು ಬೆಳೆದಿರುವ ಹೂವು, ತರಕಾರಿ, ಹಣ್ಣು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ, ಮಾರಾಟ ಮಾಡಲು ಲಾಕ್ಡೌನ್ ಅವಧಿಯಲ್ಲಿ ಸಾಧ್ಯವಾಗದೆ ರೈತರ ಹಾಗೂ ರೈತ ಕಾರ್ಮಿಕರ ಬದುಕು ದುಸ್ತರವಾಗಿದೆ.
ಇದರಿಂದ ರೈತರಿಗೆ ಸಾವಿರಾರು ಕೋಟಿ ಬೆಳೆಗಳು ನಷ್ಠವಾಗಿರುತ್ತದೆ. ಮತ್ತೊಂದು ಕಡೆ ಹಣ್ಣು, ಹಂಪಲು, ತರಕಾರಿ, ಹೂವು ಹಾಗೂ ಇನ್ನಿತರೇ ಪದಾರ್ಥಗಳು ದಿನನಿತ್ಯ ಲಭ್ಯವಾಗದೇ ಜನರು ಅದರಲ್ಲೂ ನಗರವಾಸಿಗಳು ಅತ್ಯಂತ ಕಷ್ಟಕ್ಕೆ ಗುರಿಯಾಗಿದ್ದಾರೆ. ಇದರ ಜೊತೆಗೆ ಕೋಳಿ, ಕುರಿ, ಹಂದಿ, ಮೀನು ಮುಂತಾದವುಗಳನ್ನು ಸಾಕಾಣಿಕೆ ಮಾಡುವ ರೈತರೂ ಸಹ ಮಾರುಕಟ್ಟೆಯಿಲ್ಲದೇ ಮತ್ತು ವಿವಿಧ ರೀತಿಯ ಅಪಪ್ರಚಾರಗಳ ಕಾರಣಕ್ಕಾಗಿ ನಷ್ಟಕ್ಕೆ ಗುರಿಯಾಗಿದ್ದಾರೆ.
ಈ ಎಲ್ಲಾ ಪದಾರ್ಥಗಳನ್ನು ಕೊಯಿಲು ಮಾಡುವುದಕ್ಕೆ ಮತ್ತು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುತ್ತದೆ. ಇದರಿಂದ ರೈತಾಪಿ ವರ್ಗವು ಅತ್ಯಂತ ಕಷ್ಟಕ್ಕೆ ಗುರಿಯಾಗಿರುತ್ತದೆ.
ರಾಜ್ಯ ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ ಯುದ್ಧೋಪಾದಿಯಲ್ಲಿ ರಾಜ್ಯದ ಜನರನ್ನು ಕೊರೋನಾ ರೋಗದಿಂದ ದೂರ ಮಾಡಲು ಮತ್ತು ಜನರು ನೆಮ್ಮದಿಯಿಂದ ಜೀವನ ನಡೆಸಲು ಈ ಕೆಳಕಂಡ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸುತ್ತೇವೆ.
1) ಮನುಕುಲದ ಹೆಮ್ಮಾರಿಯಾದ ಕೊರೋನಾ ರೋಗ ರಾಷ್ಟ್ರವ್ಯಾಪ್ತಿಯಲ್ಲದೇ ವಿಶ್ವವ್ಯಾಪಿಯಾಗಿ ಹರಡಿರುವ ಹಿನ್ನೆಲೆಯಲ್ಲಿ “ರಾಷ್ಟ್ರೀಯ ವಿಪತ್ತು” ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಲು ಮತ್ತು ಕೊರೋನಾ ರೋಗ ನಿವಾರಣೆ ಹಾಗೂ ಲಾಕ್ಡೌನ್ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ಎಲ್ಲಾ ರೀತಿಯ ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು.
2) ಕೊರೋನಾ ರೋಗ ಹರಡುವಿಕೆಯನ್ನು ತಡೆಯಲು ವಿಶ್ವ ಆರೋಗ್ಯ ಸಂಘಟನೆ ಕೊರೋನಾ ರೋಗದ ಪರೀಕ್ಷೆಯನ್ನು ಯುದ್ಧದೋಪಾದಿಯಲ್ಲಿ ನಡೆಸಲು ಪ್ರತಿ ಜಿಲ್ಲೆಯಲ್ಲಿ ಕೂಡಲೇ ಸುಸಜ್ಜಿತವಾದ ಲ್ಯಾಬ್ ಅನ್ನು ತೆರೆಯಲು ಕ್ರಮ ಜರುಗಿಸುವುದು ಜೊತೆಗೆ ಉತ್ತಮ ಗುಣಮಟ್ಟದ ರ್ಯಾಪಿಡ್ ಟೆಸ್ಟ್ ಕಿಟ್ಗಳು, ಪಿ.ಪಿ.ಇ. ಕಿಟ್ಗಳು, ಗ್ಲೌಸ್ಗಳು, ಸ್ಯಾನಿಟೈಜರ್ಸ್, ಔಷಧಿಗಳು ಹಾಗೂ ಸಾಕಷ್ಟು ಪ್ರಮಾಣದ ವೈದ್ಯರು, ದಾದಿಯರು ಹಾಗೂ ಇನ್ನಿತರ ಸಿಬ್ಬಂದಿಯನ್ನು ಒದಗಿಸುವುದು.
3)ಪ್ರಾಣವನ್ನೇ ಪಣವಾಗಿಟ್ಟು ಕೊರೋನಾ ರೋಗದ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಮುಂತಾದ ಸಿಬ್ಬಂದಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಸಂಬಳವನ್ನು ನೀಡಿರುವುದಿಲ್ಲವೆಂದು ತಿಳಿದುಬಂದಿರುತ್ತದೆ. ಕೂಡಲೇ ಸರ್ಕಾರ ಅವರುಗಳ ಸಂಬಳವನ್ನು ಪಾವತಿಸುವುದು ಮತ್ತು ಅವರುಗಳಿಗೆ ವಿಶೇಷ ಭತ್ಯೆಯನ್ನು (ಕನಿಷ್ಠ ಸಂಬಳದ ಎರಡು ಪಟ್ಟು) ನೀಡುವುದು.
4)ಕೊರೋನಾ ರೋಗ ಹೊರತಾದ ಇತರೆ ರೋಗಗಳಿಗೆ ಯಾವುದೇ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳು ವೈದ್ಯೋಪಚಾರ ಮಾಡದೇ ರೋಗಿಗಳು ತೀವ್ರ ತರದ ಕಷ್ಟಕ್ಕೆ ಗುರಿಯಾಗಿದ್ದಾರೆ. ಇದನ್ನು ನಿವಾರಿಸುವ ದೃಷ್ಟಿಯಿಂದ ಕೂಡಲೇ ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳನ್ನು ತೆರೆದು ರೋಗಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಲು ಸರ್ಕಾರ ಕ್ರಮ ಜರುಗಿಸುವುದು.
ಅವರುಗಳಿಗೂ ಕೊರೋನಾ ನಿರೋಧಕ ಸೌಲಭ್ಯಗಳನ್ನು ಸರ್ಕಾರ ಒದಗಿಸುವುದು.
5)ಕೊರೋನಾ ರೋಗ ಹರಡಿರುವ ರೆಡ್ ಜೋನ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸೀಲ್ಡೌನ್ ಮಾಡುವುದು ಹಾಗೂ ಎಲ್ಲಾ ಪ್ರದೇಶಗಳಲ್ಲಿ ಜನರು ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸುವುದು.
6)ಲಾಕ್ಡೌನ್ ಅವಧಿಯಲ್ಲಿ ಎಲ್ಲಾ ಕಾರ್ಮಿಕರು, ಕುಶಲಕರ್ಮಿಗಳಾದ ಸವಿತಾ ಸಮಾಜದವÀರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಹಾಗೂ ಇನ್ನಿತರ ಬಡವರಿಗೆ ತಲಾವಾರು ಪ್ರತಿ ತಿಂಗಳು ಕನಿಷ್ಠ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಪದಾರ್ಥಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಕ್ರಮ ಕೈಗೊಳ್ಳುವುದು. ಹಾಗೆಯೇ ಆಹಾರವಿಲ್ಲದೇ ಪ್ರತಿನಿತ್ಯವೂ ಹಸಿವಿನಿಂದ ನರಳುತ್ತಿರುವ ಎಲ್ಲಾ ವರ್ಗದ ಜನರಿಗೆ ಇಂದಿರಾ ಕ್ಯಾಂಟಿನ್ ಅನ್ನು ಸಮರ್ಥವಾಗಿ ಬಳಸಿಕೊಂಡು ಉಚಿತವಾಗಿ ಪ್ರತಿನಿತ್ಯ ಆಹಾರ ಪೂರೈಸಲು ಅಗತ್ಯ ಕ್ರಮ ವಹಿಸುವುದು.
7)ಯಾವ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಊರುಗಳಲ್ಲಿ ಜೀವನೋಪಾಯಕ್ಕೆ ದಾರಿಯಿಲ್ಲದೇ ಕಷ್ಟವನ್ನು ಅನುಭವಿಸುತ್ತಿದ್ದಾರೋ ಹಾಗೆಯೇ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿರುವವರ ಕೊರೋನಾ ರೋಗದ ವೈದ್ಯಕೀಯ ತಪಾಸಣೆ ಮಾಡಿ, ಅವರವರ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದು.
8) ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸುವುದು. ರೈತರು ಬೆಳೆದಿರುವ ಸದರಿ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೇ ಇದ್ದ ಸಂದರ್ಭದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡುವುದು. ಹಾಗೆಯೇ ರೈತರು ಬಯಸಿದ ಕಡೆಗಳಲ್ಲಿ ತಾವು ಬೆಳೆದ ಬೆಳೆಗಳನ್ನು ದಾಸ್ತಾನು ಮಾಡಲು ಶೈತ್ಯಾಗಾರಗಳನ್ನು ಮತ್ತು ಗೋಡೌನ್ಗಳನ್ನು ಉಚಿತವಾಗಿ ಒದಗಿಸುವುದು.
ಲಾಕ್ಡೌನ್ ಅವಧಿಯಲ್ಲಿ ಕೊಯಿಲಿಗೆ ಬಂದ ಹಣ್ಣು, ಹೂವು, ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ಸಾಗಾಣಿಕೆ ಮಾಡಲು ಹಾಗೂ ಮಾರಾಟ ಮಾಡಲು ಅವಕಾಶವಾಗದೇ ನಷ್ಟ ಅನುಭವಿಸಿರುವ ರೈತರಿಗೆ ಹಾಗೂ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೇ ನಷ್ಟ ಅನುಭವಿಸಿರುವ ರೈತರಿಗೂ ಸೂಕ್ತ ನಷ್ಟ ಪರಿಹಾರವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ನೀಡುವುದು.
9)ಕೊರೋನಾ ರೋಗ ಹರಡಿರುವ ವಿಚಾರವಾಗಿ ನಿರ್ಧಿಷ್ಟ ಜಾತಿ, ಧರ್ಮ, ವರ್ಗಗಳನ್ನು ಗುರಿಯಾಗಿ ಇಟ್ಟುಕೊಂಡು ಅವರುಗಳೇ ಕೊರೋನಾ ರೋಗ ಹರಡಲು ಕಾರಣರು ಎಂದು ಕೆಲವು ಬಿ.ಜೆ.ಪಿ. ಸಂಸದರು, ಶಾಸಕರು ಹಾಗೂ ಇನ್ನಿತರರು ಮಾಧ್ಯಮಗಳ ಮೂಲಕ ಹೇಳಿಕೆ ಕೊಟ್ಟಿರುತ್ತಾರೆ. ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ ಸುದ್ದಿಗಳನ್ನು ಹರಡುತ್ತಿದ್ದರೂ ಸರ್ಕಾರ ಪರಿಣಾಮಕಾರಿಯಾದ ಕ್ರಮಗಳನ್ನು ಜರುಗಿಸಿರುವುದಿಲ್ಲ ಹಾಗೂ ಆರೋಪಿಗಳನ್ನು ದಸ್ತಗರಿ ಮಾಡಿರುವುದಿಲ್ಲ. ಬದಲಾಗಿ ಹಾಸನ ಮುಂತಾದ ಕಡೆಗಳಲ್ಲಿ ಆರೋಪಿತರ ಮೇಲೆ ಕೇಸು ದಾಖಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ತನಿಖೆಗೆ ಆದೇಶಿಸಿ, ಕೆಲವರನ್ನು ಕಡ್ಡಾಯವಾಗಿ ರಜೆ ಕಳುಹಿಸಿ, ಪೊಲೀಸರ ನೈತಿಕ ಸ್ಥೈರ್ಯವನ್ನು ಸರ್ಕಾರ ಕುಂದಿಸಿರುತ್ತದೆ. ಕೂಡಲೇ ಸರ್ಕಾರ ಇಂತಹ ಪೊಲೀಸರ ಮೇಲೆ ಕೈಗೊಂಡಿರುವ ಕ್ರಮಗಳನ್ನು ವಾಪಸ್ ಪಡೆಯುವುದು ಹಾಗೂ ಅಪರಾಧ ಎಸಗಿರುವ ಆರೋಪಿತರ ಮೇಲೆ ಕೇಸು ದಾಖಲಿಸಿ, ಅವರನ್ನು ದಸ್ತಗಿರಿ ಮಾಡುವುದು. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಪುನರಾವರ್ತನೆಯಾಗದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ವಾರ್ಡ್ ಮಟ್ಟಗಳಲ್ಲಿ ಜನರಲ್ಲಿ ಜಾಗೃತಿ ಉಂಟು ಮಾಡಲು ಸರ್ಕಾರ ಸೂಕ್ತ ಕ್ರಮ ವಹಿಸುವುದು.
10)ಲಾಕ್ಡೌನ್ ಅವಧಿಯಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಿದ ಕಾರಣ ನೋಂದಾಯಿತ ಕಾರ್ಮಿಕರಿಗೆ ಕೆಲಸವೂ ಇಲ್ಲದೇ, ಕೂಲಿಯೂ ಇಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ. ಆದುದರಿಂದ ಇವರುಗಳಿಗೆ ಲಾಕ್ಡೌನ್ ಅವಧಿಯ ದಿನಗೂಲಿಯನ್ನು ಅವರುಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಜಮಾ ಮಾಡತಕ್ಕದ್ದು ಮತ್ತು ಕೂಡಲೇ ನರೇಗಾ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಲು ಸರ್ಕಾರ ಕ್ರಮ ಜರುಗಿಸುವುದು.
11)ಕುಶಲಕರ್ಮಿಗಳಾದ ಸವಿತಾ ಸಮಾಜದವÀರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥ ಮುಂತಾದ ವೃತ್ತಿಗಳವರಿಗೆ ಲಾಕ್ಡೌನ್ ಅವಧಿಯಲ್ಲಿ ವ್ಯಾಪಾರವಿಲ್ಲದೇ ಅತ್ಯಂತ ನಷ್ಟಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರುಗಳಿಗೆ ವಿಶೇಷ ಪ್ಯಾಕೇಜ್ ರೂಪಿಸಿ, ಪ್ರತಿಯೊಬ್ಬರಿಗೆ ಪ್ರತಿ ತಿಂಗಳೂ ಕನಿಷ್ಠ ರೂ.10,000/-ಗಳನ್ನು ಲಾಕ್ಡೌನ್ ಅವಧಿಯಲ್ಲಿ ನೀಡತಕ್ಕದ್ದು.
12)ಲಾಕ್ಡೌನ್ ಅವಧಿಯಲ್ಲಿ ಸರ್ಕಾರದಿಂದ ಬಡವರಿಗೆ ಹಂಚಿಕೆ ಮಾಡುತ್ತಿರುವ ಆಹಾರ ಮತ್ತು ಆಹಾರ ಪದಾರ್ಥಗಳ ಕಿಟ್ಗಳ ಮೇಲೆ ನಮೂದಿಸಿರುವ ಸರ್ಕಾರಿ ಎಂಬ್ಲೆಮ್ಗಳ ಮೇಲೆ ಆಡಳಿತ ಪಕ್ಷದ ನಾಯಕರುಗಳ ಹಾಗೂ ಶಾಸಕರುಗಳ ಮತ್ತು ಪಕ್ಷದ ಚಿನ್ಹೆ ಹೊಂದಿರುವ ಲೇಬಲ್ಗಳನ್ನು ಅಂಟಿಸಿ ನಮ್ಮ ಪಕ್ಷದಿಂದಲೇ ಆಹಾರ ವಿತರಣೆ ಮಾಡಲಾಗುತ್ತಿದೆಯೆಂದು ಮತದಾರರನ್ನು ಓಲೈಸಿಕೊಳ್ಳುವ ನೀಚ ರಾಜಕೀಯ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಿ, ಘನತೆಯಿಂದ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವುದು. ಹಾಗೂ ಸರ್ಕಾರದ ಸೌಲಭ್ಯಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿರುವ ಶಾಸಕರು ಹಾಗೂ ರಾಜಕೀಯ ನಾಯಕರುಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ.
13)ಜೀವ ಮತ್ತು ಜೀವನವನ್ನು ಉಳಿಸಿ, ಬೆಳೆಸಲು ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೂಡಲೇ ರಾಜಕೀಯ ತಜ್ಞರು, ಆರ್ಥಿಕ ತಜ್ಞರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ನಾಯಕರಗಳನ್ನು ಒಳಗೊಂಡಿರುವ ಕಾರ್ಯಪಡೆಯನ್ನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳುವುದು.
14)ಕೊರೋನಾ ರೋಗದ ಕಾರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳು ನಡೆಯುತ್ತವೋ ಇಲ್ಲವೋ, ನಡೆಯುವುದಾದರೆ ಯಾವಾಗ ನಡೆಯುತ್ತವೋ ಎಂಬ ಆತಂಕದಲ್ಲಿದ್ದಾರೆ. ಈ ಆತಂಕವನ್ನು ದೂರ ಮಾಡಲು ಸರ್ಕಾರ ಕೂಡಲೇ ಕ್ರಮ ಜರುಗಿಸುವುದು.
15)ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಜನರ ಬದುಕನ್ನು ಹಸನುಗೊಳಿಸುವ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ವಿಶೇಷ ಪ್ಯಾಕೇಜ್ಗಳನ್ನು ಎಲ್ಲಾ ಫಲಾನುಭವಿಗಳಿಗೆ ಯುದ್ಧೋಪಾದಿಯಲ್ಲಿ ದೊರೆಯುವಂತೆ ಸರ್ಕಾರ ಕ್ರಮ ವಹಿಸುವುದು.