ಲಂಡನ್, ಮಾರ್ಚ್ 23, 2020 (www.justkannada.in): ಯಾವುದೇ ದೇಶಗಳಾಗಲೀ ಕರೊನಾ ನಿಯಂತ್ರಣಕ್ಕಾಗಿ ಸಂಪೂರ್ಣವಾಗಿ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ. ಅದು ಪರಿಹಾರವೂ ಅಲ್ಲ ಎಂದು ವಿಶ್ವಸಂಸ್ಥೆ ತಜ್ಞರ ಎಚ್ಚರಿಕೆ ನೀಡಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಲೇಬೇಕಾಗುತ್ತದೆ. ಸದ್ಯದ ಮಟ್ಟಿಗೆ ನಾವು ಅನಾರೋಗ್ಯಕ್ಕೆ ಒಳಗಾದವರನ್ನು, ಕರೊನಾ ತಗುಲಿರುವವರನ್ನು, ಸೋಂಕು ತಾಗಿರುವ ಶಂಕೆ ಇರುವವರನ್ನು ಗುರುತಿಸಿ, ಪ್ರತ್ಯೇಕಿಸಬೇಕು. ಹಾಗೇ, ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋದವರನ್ನೂ ಆದಷ್ಟು ಬೇಗ ಪತ್ತೆಹಚ್ಚಿ, ಪ್ರತ್ಯೇಕ ಮಾಡಬೇಕು ಎಂದು ಡಬ್ಲ್ಯೂಎಚ್‌ಒನ ಆರೋಗ್ಯ ತಜ್ಞ ಮೈಕ್ ರಯಾನ್ ತಿಳಿಸಿದ್ದಾರೆ.
ಲಾಕ್ಡೌನ್ ಮಾಡುವುದು ಅಪಾಯ. ಕರೊನಾ ನಿಯಂತ್ರಣಕ್ಕೆ ಗಂಭೀರ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳದೆ, ಸಂಪೂರ್ಣ ಬಂದ್ ಮಾಡಿದರೆ ಉಪಯೋಗವಿಲ್ಲ. ಎಷ್ಟು ದಿನ ಅಂತ ಲಾಕ್ ಡೌನ್ ಮಾಡಲು ಸಾಧ್ಯ? ಅದನ್ನು ತೆಗೆಯಲೇ ಬೇಕಾಗುತ್ತದೆ. ತೆಗೆದ ತಕ್ಷಣ ಮತ್ತೆ ಕರೊನಾ ವೈರಸ್ ಹರಡುತ್ತದೆ ಎಂದಿದ್ದಾರೆ.
ಮೊದಲು ಸೋಂಕು ಪ್ರಸರಣವನ್ನು ತಡೆಯಬೇಕು. ಅದಾದ ಬಳಿಕ ವೈರಸ್ ನಿರ್ಮೂಲನೆ ಮಾಡಬೇಕು ಎಂದು ಮೈಕ್ ರಯಾನ್ ಹೇಳಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಹಲವು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಅದರಲ್ಲಿ ಒಂದು ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ ಎಂದು ರಯಾನ್ ತಿಳಿಸಿದ್ದಾರೆ.