ಮೈಸೂರು,ಅಕ್ಟೋಬರ್,26,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆ ಈ ಬಾರಿ ಈದ್ ಮಿಲಾದ್ ಹಬ್ಬವನ್ನ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾರ್ಗಸೂಚಿ ಪ್ರಕಾರ ಆಚರಣೆ ಮಾಡುವಂತೆ ಮುಸ್ಲೀಂ ಸಮುದಾಯ ಬಾಂಧವರಿಗೆ ಬೆಂಗಳೂರು ನಗರ ಉತ್ತರ ಜಿಲ್ಲೆಯ ವಕ್ಫ್ ಅಧಿಕಾರಿಯಾದ ರಝಿಯಾ ಸುಲ್ತಾನಾ ಮನವಿ ಮಾಡಿದ್ದಾರೆ.
ಅಕ್ಟೋಬರ್ 30 ರಂದು ನಡೆಯುವ ಈದ್ ಮಿಲಾದ್ ಹಬ್ಬದ ವೇಳೆ ಕೊರೋನಾ ಮಾರ್ಗಸೂಚಿ ಪಾಲಿಸುವ ಬಗ್ಗೆ ಸೂಚಿಸಿರುವ ಬೆಂಗಳೂರು ನಗರ ಉತ್ತರ ಜಿಲ್ಲೆಯ ವಕ್ಫ್ ಅಧಿಕಾರಿಯಾದ ರಝಿಯಾ ಸುಲ್ತಾನಾ, ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರ್ಕಾರವು ನಿರ್ಧರಿಸಿದೆ. ಹೀಗಾಗಿ ಮುಸ್ಲಿಂ ಸಮುದಾಯದ ಬಾಂಧವರು ಈ ಬಾರಿಯ ಈದ್ ಮಿಲಾದ್ ಹಬ್ಬವನ್ನು ರಾಜ್ಯ ಸರ್ಕಾರ ನೀಡಿರುವ ಆದೇಶಗಳಂತೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾರ್ಗಸೂಚಿಗಳನ್ವಯ ಆಚರಣೆ ಮಾಡಬೇಕು.
ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ವೇಳೆ ಸರ್ಕಾರದ ಆದೇಶ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಈ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲ ಮಸೀದಿಗಳು ಹಾಗೂ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತಾಧಿಕಾರಿಗಳಿಗೆ ರಝಿಯಾ ಸುಲ್ತಾನಾ ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ಈ ಬಾರಿಯ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನೆರವೇರಲಿರುವ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ ಜುಲೂಸ್, ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ/ಸಾಂಸ್ಕೃತಿಕ ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮಸೀದಿಗಳಲ್ಲಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್-19 ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ದೈಹಿಕ ಅಂತರ ಕಾಪಾಡಿಕೊಂಡು ನೆರವೇರಿಸುವುದು. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಡಿಜಿಟಲ್ ಸೌಂಡ್ ಸಿಸ್ಟಮ್ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ. ಮುಖಗವಸು ಮಾಸ್ಕ್ ಗಳನ್ನು ಕಡ್ಡಾಯವಾಗಿ ಎಲ್ಲರೂ ಉಪಯೋಗಿಸತಕ್ಕದ್ದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಹತ್ತು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಹಬ್ಬವನ್ನು ಆಚರಿಸುವುದು.
ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಹಾಗೂ ಸೋಪಿನೊಂದಿಗೆ ಕೈತೊಳೆಯಲು ಸೂಕ್ತ ವ್ಯವಸ್ಥೆಯನ್ನು ಮಾಡುವುದು ಕಡ್ಡಾಯವಾಗಿ ಎಲ್ಲರೂ 6 ಅಡಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು. ಖಬರಸ್ಥಾನ ಒಳಗೊಂಡಂತೆ ಯಾವುದೇ ರೀತಿಯ ತೆರೆದ ಜಾಗದಲ್ಲಿ ಪ್ರಾರ್ಥನೆ ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ. ಸರಕಾರದ ದಿನಾಂಕ 06.06.2020 ರ ಸುತ್ತೋಲೆಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಅನುಸರಿಸುವುದು. ಈದ್ ಮಿಲಾದ್ ಹಬ್ಬದ ಆಚರಣೆ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಝಿಯಾ ಸುಲ್ತಾನಾ ಅವರು ಕೋರಿದ್ದಾರೆ.
Key words: Corona- Eid Milad festival- State Government Karnataka State Waqf Board -guidelines