ಮೈಸೂರು, ಜೂ.03, 2020 : (www.justkannada.in news) : ಸತ್ಯವಾಗಲು ಇದು ಮೈಮರೆಯುವ ಕಾಲವಲ್ಲ. ಬದಲಿಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಬೆಳವಣಿಗೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳುವಾಗ ಅವರ ಮಾತಲ್ಲಿ ದುಗುಡ ಗೋಚರಿಸುವಂತಿತ್ತು.
ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ. ಈತನಕ ಒಂದೇ ಒಂದು ಕೋವಿಡ್ 19 ಪ್ರಕರಣ ದಾಖಲಾಗದೆ ರಾಜ್ಯದ ಗಮನ ಸೆಳೆದಿದ್ದ ಚಾಮರಾಜನಗರ ಜಿಲ್ಲೆ, ಇದೀಗ ದಕ್ಷಿಣ ಭಾರತದಲ್ಲೇ ಕರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ‘ ಜಸ್ಟ್ ಕನ್ನಡ ಡಾಟ್ ಇನ್ ‘ ಮಾತನಾಡಿಸಿತು. ಆಗ ಅವರು ಹೇಳಿದಿಷ್ಟು…
ಕರೋನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿರುವುದು ಸಂತೋಷವೇ ಆದರು ಇದರಿಂದ ನಾವ್ಯಾರು ಮೈಮರೆಯುವಂತಿಲ್ಲ. ಕಾರಣ ಕೋವಿಡ್ 19 ಸೋಂಕಿತರ ಸಂಖ್ಯೆ ಎಲ್ಲೆಡೆ ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ. ಈ ವೈರಾಣು ಇನ್ನೂ ಚಟುವಟಿಕೆಯಿಂದ ಇದೇ ಎಂಬುದಕ್ಕೆ ಇದು ಪುರಾವೆ. ಆದ್ದರಿಂದ ನಾವು ಈ ಹಿಂದಿಗಿಂತಲೂ ಮತ್ತಷ್ಟು ಹೆಚ್ಚು ಜಾಗೃತರಾಗಿರಬೇಕಾಗಿದೆ. ಇದು ಜಾವಾಬ್ದಾರಿಯನ್ನು ಹೆಚ್ಚಿಸಿದೆ.
ಚಾಮರಾಜನಗರದ ಜನ ಹಾಗೂ ಜನಪ್ರತಿನಿಧಿಗಳು ಸಂಕಷ್ಟದಲ್ಲೂ ಪ್ರಬುದ್ಧತೆ ಮೆರೆದರು. ಅವರ ಸಹಕಾರದಿಂದಲೇ ಈಗಲೂ ಜಿಲ್ಲೆ ಹಸಿರು ವಲಯದಲ್ಲಿದೆ. ಜಿಲ್ಲಾಡಳಿತದ ಪ್ರತಿ ಕಠಿಣ ನಿರ್ಬಂಧಕ್ಕೂ ಪೂರ್ಣ ಪ್ರಮಾಣದ ಸಹಕಾರ ನೀಡಿದರು. ಇದಕ್ಕೆ ಇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ.
ಲಾಕ್ ಡೌನ್ ಜಾರಿಯಲ್ಲಿದ್ದ ಮಾರ್ಚ್ ಮಾಸಕ್ಕಿಂತ ಈಗ ಪರಿಸ್ಥಿತಿ ಕಠಿಣವಾಗಿದೆ. ಈಗಲೂ ಕರೋನಾ ವೈರಸ್ ಚಟುವಟಿಕೆಯಿಂದ ಇದೆ. ಕೋವಿಡ್ ಉಪಟಳ ಸದ್ಯಕ್ಕೆ ತಪ್ಪಿದ್ದಲ್ಲ. ಆದ್ದರಿಂದ ಜನತೆ ಈಗ ಹೆಚ್ಚು ಹೆಚ್ಚು ಜಾಗೃತರಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದನ್ನು ಪಾಲಿಸಲೇ ಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ಕಿವಿಮಾತು ಹೇಳಿದರು.
oooooo
key words : corona-free-district-increases-our-responsibility-more-now-chamarajanagara-DC-Dr.M.R.Ravi