ಬೆಂಗಳೂರು. ಫೆಬ್ರವರಿ, 20,2021(www.justkannada.in): ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಲ್ಲಿ ಕೊರೋನಾ ರೋಗವು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಿ, ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಲು ಕ್ರಮಕೈಗೊಳ್ಳುವಂತೆ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಹಾಗೂ ಮುಖ್ಯಕಾರ್ಯದರ್ಶಿಗೆ ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ಪತ್ರಬರೆದಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಡಿಸಿಎಂ ಗೋವಿಂದ ಕಾರಜೋಳ, ನೆರೆ ರಾಜ್ಯಗಳಲ್ಲಿ ಕೊರೊನಾ ಉಲ್ಬಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗಡಿ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಅನೇಕ ತಾಲೂಕುಗಳು ನೆರೆ ರಾಜ್ಯಗಳಿಗೆ ಹೊಂದಿಕೊಂಡಿವೆ. ಸಾರ್ವಜನಿಕರು, ಕೂಲಿ ನಾಲಿ ಮಾಡುವ ಜನರು ನೆರೆ ರಾಜ್ಯಗಳಿಗೆ ಪ್ರತಿ ನಿತ್ಯ ಸಂಚರಿಸುತ್ತಿದ್ದಾರೆ.

ಅಲ್ಲದೇ ಜೀವನೋಪಾಯಕ್ಕಾಗಿ ಹೆಚ್ಚು ಜನರು ಗೋವಾಕ್ಕೆ ಹೋಗಿ ಬರುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಸೊಂಕು ತಗುಲಿ ಗಡಿ ಜಿಲ್ಲೆಗಳಲ್ಲಿ ಕೊರೊನಾ ಉಲ್ಬಣ ವಾಗುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಕಟ್ಟು ನಿಟ್ಟು ತಪಾಸಣೆಗೊಳಪಡಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಆದೇಶಿಸುವಂತೆ ಗೋವಿಂದ ಎಂ ಕಾರಜೋಳ ಸೂಚಿಸಿದ್ದಾರೆ.
Key words: Corona -Increase -DCM -Govinda Karajola- instructs – inspection – districts- border -check posts.