ಮೈಸೂರು,ಜು,18,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದ್ದು ಈ ನಡುವೆ ಎನ್. ಆರ್ ಕ್ಷೇತ್ರದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲಾಗುತ್ತಿದೆ.
ಸಾಂಸ್ಕೃತಿಕ ನಗರಿಯಲ್ಲಿ ಕೊರೊನಾ ಆರ್ಭಟ ಹಿನ್ನೆಲೆ, ನರಸಿಂಹರಾಜ ಕ್ಷೇತ್ರದಲ್ಲಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ಗೆ ಚಾಲನೆ ನೀಡಲಾಯಿತು. ಡಿಎಚ್ಓ ಡಾ. ವೆಂಕಟೇಶ್ ನೇತೃತ್ವದಲ್ಲಿ ರ್ಯಾಪಿಡ್ ಟೆಸ್ಟ್ ನಡೆಸಲಾಗುತ್ತಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸೋಂಕಿನ ಲಕ್ಷಣ ಕಂಡುಬಂದವರಿಗೆ ಸ್ಥಳದಲ್ಲೇ ರ್ಯಾಪಿಡ್ ಆಂಟಿಜನ್ ಕಿಟ್ ಮೂಲಕ ತಪಾಸಣೆ ನಡೆಸುವುದು. ರ್ಯಾಪಿಡ್ ಕಿಟ್ ನಿಂದ ಕೇವಲ 30 ನಿಮಿಷಗಳಲ್ಲಿ ಕೋವಿಡ್ 19 ಫಲಿತಾಂಶ ಲಭ್ಯವಾಗಲಿದೆ. ಸೋಂಕು ಪತ್ತೆಯಾದಲ್ಲಿ ಅಂತಹ ವ್ಯಕ್ತಿಗಳನ್ನ ನಿಗದಿತ ಕೋವಿಡ್ ಕೇರ್ ಸೆಂಟರ್ ಗೆ ರವಾನಿಸಲಾಗುತ್ತದೆ. ಒಟ್ಟು 15 ಆರೋಗ್ಯ ಇಲಾಖೆ ತಂಡಗಳಿಂದ ಉದಯಗಿರಿ ಭಾಗಗಳಲ್ಲಿ ಈ ತಪಾಸಣೆ ನಡೆಸಲಾಗುತ್ತಿದೆ.
ರ್ಯಾಪಿಡ್ ಟೆಸ್ಟ್ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಎಚ್ಓ ಡಾ ವೆಂಕಟೇಶ್, ಈಗಾಗಲೇ ನಮ್ಮಲ್ಲಿ 2200 ರಷ್ಟು ರ್ಯಾಪಿಡ್ ಆಂಟಿಜನ್ ಕಿಟ್ ಗಳಿವೆ. ಅದನ್ನು ಬಳಸಿಕೊಂಡು ಸೋಂಕು ಹಾಗೂ ಮೃತರ ಸಂಖ್ಯೆ ಹೆಚ್ಚಾಗಿರುವ ಭಾಗಗಳಲ್ಲಿ ತಪಾಸಣೆ ನಡೆಸಲಾಗುತ್ತೆ. ಇದರಿಂದ ಸೋಂಕಿಗೆ ತುತ್ತಾಗಿರುವವರನ್ನು ಆದಷ್ಟು ಬೇಗ ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ಮಾತ್ರವೇ ಕೋವಿಡ್ 19 ಪರೀಕ್ಷೆ ಮಾಡಲಾಗವುದು ಎಂದು ತಿಳಿಸಿದರು.
ಈ ಭಾಗದವರು ಅಂತಿಮ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ರೀತಿ ಮಾಡಿದರೆ ಚಿಕಿತ್ಸೆ ತಡವಾಗಿರುತ್ತದೆ ಜೊತೆಗೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾಮಾನ್ಯ ಜ್ವರ ಲಕ್ಷಣ ಕಂಡುಬಂದು, ಉಸಿರಾಟ ತೊಂದರೆ ಕಂಡುಬಂದಲ್ಲಿ ಕೂಡಲೇ ಕೋವಿಡ್ 19 ಪರೀಕ್ಷೆಗೊಳಗಾಗಬೇಕು. ಜೊತೆಗೆ ನಮ್ಮ ಸಿಬ್ಬಂದಿಗಳು 15 ತಂಡಗಳಾಗಿ ಈ ಭಾಗದಲ್ಲಿ ಸರ್ವೆ ಮಾಡಲಿದ್ದಾರೆ ಎಂದು ಡಿಎಚ್ಓ ಡಾ ವೆಂಕಟೇಶ್ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಇನ್ನೂ ಸೋಂಕು ಸಮುದಾಯಕ್ಕೆ ಹರಡಿಲ್ಲ. ಹಾಗಾಗಿ ಮೈಸೂರಿನ ಜನತೆ ಆತಂಕ ಪಡುವ ಅಗತ್ಯವಿಲ್ಲ. ಇಂದು ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಇಂದು ಕೂಡ ಮೃತರ ಸಂಖ್ಯೆ ಏರಿಕೆಯಾಗಲಿದೆ. ಪರಿಸ್ಥಿತಿ ನಿಭಾಯಿಸಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಡಿಎಚ್ಓ ಡಾ ವೆಂಕಟೇಶ್ ತಿಳಿಸಿದರು.
Key words: Corona-Rapid Antigen Test -Health Department -Staff – Mysore.