ಬೆಂಗಳೂರು, ಏಪ್ರಿಲ್ 16, 2020 (www.justkannada.in): ಕೊರೋನ ಸಾಂಕ್ರಮಿಕ ರೋಗದಿಂದ ಇಡೀ ದೇಶವೇ ಲಾಕ್ಡೌನ್ ಆಗಿದ್ದು, ಇದರಿಂದ ಎಲ್ಲರು ಮನೆಯಲ್ಲೇ ಇರುವಂಥ ಸ್ಥಿತಿ ನಿರ್ಮಾಣವಾಗಿದೆ. ಸದಾ ಮನೆಯಲ್ಲೇ ಇರುವುದರಿಂದ ಕೆಲವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಸಾಂಕ್ರಾಮಿಕ ರೋಗದಷ್ಟೇ ಮಾನಸಿಕ ಖಿನ್ನತೆ ಕೂಡ ಹೆಚ್ಚಾಗುತ್ತಿದೆ. ಈ ಮಾನಸಿಕ ಖಿನ್ನತೆ ದೂರ ಮಾಡುವ ಉದ್ದೇಶದಿಂದ “ಪೀಪಲ್ ಟ್ರೀ ಮಾರ್ಗಾ” ವತಿಯಿಂದ ಉಚಿತವಾಗಿ ದೂರವಾಣಿ ಕೌನ್ಸಲಿಂಗ್ ಪ್ರಾರಂಭಿಸಿದೆ.
ಪ್ರತಿ ದಿನ ಬೆಳಗ್ಗೆ 10 ರಿಂದ11 ಗಂಟೆವರೆಗೆ ಪೀಪಲ್ ಟ್ರೀ ಮಾರ್ಗಾ ಕ್ಕೆ ಕರೆ ಮಾಡಿ ತಜ್ಞ ಮನೋ ವೈದ್ಯರೊಂದಿಗೆ ಮಾತನಾಡುವ ಮೂಲಕ ತಮ್ಮ ಮಾನಸಿಕ ಖಿನ್ನತೆಯನ್ನು ದೂರ ಮಾಡಿಕೊಳ್ಳಬಹುದು.
ಸದಾ ಮನೆಯಲ್ಲಿಯೇ ಇರುವುದರಿಂದ ಖಿನ್ನತೆ ಮೂಡಬಹುದು. ಮನೆಯಲ್ಲಿ ಜಗಳದಂಥ ವಾತಾವರಣವೂ ಸೃಷ್ಟಿಯಾಗಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲಿನಂತೆ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಿಲ್ಲ. ಎಲ್ಲಿಯೂ ಹೋಗಲು ಆಗುವುದಿಲ್ಲ. ಇದರಿಂದ ಸ್ವಾಭಾವಿಕವಾಗಿ, ಅಜ್ಞಾತ ಮತ್ತು ಅನಿಶ್ಚಿತ ಭೀತಿಗೆ ಕಾರಣವಾಗಿ, ಮನೋ ತೊಳಲಾಟ ಶುರುವಾಗುತ್ತಿದೆ.
ಸಾಂಕ್ರಾಮಿಕ ರೋಗದಿಂದ ದೂರವಿರಲು ಅಗತ್ಯವಾದ ಕ್ರಮಗಳನ್ನು ಅನುಸರಿಸುವುದರ ಹೊರತಾಗಿ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ದೃಷ್ಟಿಯಿಂದ “ಪೀಪಲ್ ಟ್ರೀ ಮಾರ್ಗಾ” ಸಾಂಕ್ರಾಮಿಕ ಸಂಬಂಧಿತ ಆತಂಕವನ್ನು ಎದುರಿಸಲು ಜನರಿಗೆ ಸಹಾಯ ಮಾಡಲು ಮನೋ ತಜ್ಞರ ತಂಡದಿಂದ ದೂರವಾಣಿ ಸಮಾಲೋಚನೆ ನೀಡುತ್ತಿದೆ.
ವಿಶ್ವದ ಅತ್ಯುತ್ತಮ ಆಸ್ಪತ್ರೆಗಳಿಂದ ತರಬೇತಿ ಪಡೆದ, ನುರಿತ, ಅನುಭವಿ ಮನೋವೈದ್ಯರು ಪೀಪಲ್ ಟ್ರೀ ಮಾರ್ಗಾದಲ್ಲಿ ಇದ್ದಾರೆ. ಜೊತೆಗೆ ಆಯಾ ವಯೋಮಾನಕ್ಕೆ ತಕ್ಕಂಥ ಮನೋವೈದ್ಯರು ಸಹ ಇಲ್ಲಿ ಲಭ್ಯವಿದ್ದಾರೆ.
ಮಕ್ಕಳು, ವಯಸ್ಕರು,ವೃದ್ಧರಿಗೆ ಅವರ ವಯಸ್ಸಿನ ಆಧಾರಿತ ಸಮಸ್ಯೆಗಳನ್ನು ಸಹ ಆಲಿಸಿ ಪರಿಹಾರ ನೀಡುತ್ತಾರೆ.
ಜೊತೆಗೆ , ಮಾನಸಿಕ ಒತ್ತಡ, ಲೈಂಗಿಕ ಹಿಂಸೆ, ನಿದ್ರಾಹೀನತೆಗೆ ತಕ್ಕಂಥ ಚಿಕಿತ್ಸೆ, ಮಾನಸಿಕ ಚಿಕಿತ್ಸೆಗಳು, ಜೈವಿಕ ಚಿಕಿತ್ಸೆಗಳು, ಡೇಕೇರ್ ನಂಥ ಸೌಲಭ್ಯವೂ ಇದೆ.. ಒಂದು ವೇಳೆ ಚಿಕಿತ್ಸೆಯ ಅಗತ್ಯವಿದ್ದರೆ ಅಂಥವರಿಗೆ ಮನೋವೈದ್ಯಕೀಯ ತೀವ್ರ ನಿಗಾ ಘಟಕದೊಂದಿಗೆ ತುರ್ತು ಆರೈಕೆ ಮಾಡಲೆಂದೇ ಬೆಂಗಳೂರಿನ ಯಲಹಂಕ, ನ್ಯೂಟೌನ್ಲ್ಲಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಿದೆ.
ಕರೋನ ರೋಗ ಎದುರಿಸುವ ಬಗ್ಗೆ ಹೆಚ್ಚಿನ ಆತ್ಮಸ್ಥೈರ್ಯ ಹಾಗೂ ಕೌನ್ಸಲಿಂಗ್ಗಾಗಿ 080-46659999 ಈ ಸಂಖ್ಯೆಗೆ ಕರೆ ಮಾಡಬಹುದು.