ಉಡುಪಿ,ಅಕ್ಟೊಂಬರ್,04,2020(www,justkannada.in) : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟಿರುವುದಾಗಿ ಹೇಳಿ ಕುಟುಂಬದೆದುರು ಯಾರದೋ ದೇಹ ಸುಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ನೆರಂಬಳ್ಳಿ ನಿವಾಸಿ ಗಂಗಾಧರ್ ಎಂಬುವವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಟಿಎಂಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. 20 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ, ಮೃತಪಟ್ಟಿರುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು.
ಈ ಸಂದರ್ಭ ಕುಟುಂಬಸ್ಥರು ಮೃತರ ಮುಖ ನೋಡುವುದಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿಯೂ, ಒತ್ತಾಯ ಪೂರ್ವಕವಾಗಿ ಮೃತ ದೇಹವನ್ನು ನೋಡಿದಾಗ ಅಲ್ಲಿ ತಮ್ಮ ತಂದೆಯ ಬದಲಿಗೆ ಬೇರೆ ಯಾರದೋ ಮೃತ ದೇಹವಿರುವುದು ಕಂಡು ಬಂದಿದೆ. ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ವಿಧಾನಪರಿಷತ್ ಸದಸ್ಯ ರಘು ಆಚಾರ್ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಒಂದು ಸಂಗತಿ ನಿಜವೇ ಆಗಿದ್ದರೆ ಉಡುಪಿಯ ಜಿಲ್ಲಾಡಳಿತ ಅವರಿಗೆ ನ್ಯಾಯವನ್ನು ಒದಗಿಸಿಕೊಡಬೇಕು. ಈ ರೀತಿಯ ಘಟನೆಗಳು ಪದೇ, ಪದೇ ನಡೆಯುತ್ತಿರುವುದಕ್ಕೆ ಕಾರಣ ಎಲ್ಲಾ ಶಾಸಕರುಗಳು, ಮಂತ್ರಿಗಳ ಬೇಜವಾಬ್ದಾರಿತನವಾಗಿದೆ ಎಂದು ಕಿಡಿಕಾರಿದ್ದಾರೆ.
ಎಲ್ಲ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಬರುವಂತಹ ಕರೋನಾಕ್ಕೆ ನಿಯೋಜಿಸಿರುವ ಖಾಸಗಿ ಆಸ್ಪತ್ರೆಗಳ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡಿದ್ದರೆ ಇಂತಹ ಸಂಗತಿಗಳು ನಡೆಯಲು ಅವಕಾಶ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
key words : Corona-Someone-name-someone-body