ಬೆಂಗಳೂರು,ಮಾ.3,2020(www.justkannada.in): ಜಗತ್ತಿನಲ್ಲಿ ಭಾರಿ ತಲ್ಲಣ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ತೆಲಂಗಾಣದಲ್ಲಿ ಪತ್ತೆಯಾಗಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕೊರೋನಾ ವೈರಸ್ ಭೀತಿ ಹಿನ್ನೆಲೆ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ರಾಯಚೂರು,ಬಾಗಲಕೋಟೆ ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರನ್ನ ತಪಾಸಣೆಗೊಳಪಡಿಸಲಾಗಿದೆ. ವೈದ್ಯರು ಮೂರು ತಂಡಗಳಾಗಿ ತಪಾಸಣೆ ನಡೆಸುತ್ತಿದ್ದಾರೆ.
ಹಾಗೆಯೇ ಕೊರೋನಾ ವೈರಸ್ ಬಗ್ಗೆ ಕಿಮ್ಸ್ ಆಸ್ಪತ್ರೆಯಲ್ಲೂ ಎಚ್ಚರ ವಹಿಸಲಾಗಿದ್ದು ಆಸ್ಪತ್ರೆಯ ಎಲ್ಲಾ ವೈದ್ಯರು, ಸಿಬ್ಬಂದಿಗಳಿಗೆ ರೋಗಿಗಳ ಸಂಬಂಧಿಕರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಹುಬ್ಬಳ್ಳಿ, ಬೆಳಗಾವಿ, ಬೀದರ್, ಕಲಬುರಗಿ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಆಗಮಿಸುವ ಹಾಗೂ ಹೊರಹೋಗುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಬಾಗಲಕೋಟೆಯಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಐತಿಹಾಸಿಕ ಸ್ಥಳಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು ಪ್ರವಾಸಿಗರ ಮೇಲೆ ನಿಗಾ ಇಡಲಾಗಿದೆ.
ಇನ್ನು ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲೂ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಚೀನಾ ಸೇರಿದಂತೆ ನೋವಲ್ ಕೊರೋನಾ ವೈರಸ್ ಸೋಂಕು ವರದಿಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ, ಶಂಕಿತ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ ಅವರ ಮೇಲೆ 28 ದಿನಗಳ ಕಾಲ ನಿಗಾ ವಹಿಸಲಾಗುವುದು. ಅಲ್ಲದೆ, ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಇರುವ ಸಾರಿಗೆ ಸಂಪರ್ಕದ ಬಗ್ಗೆಯೂ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Key words: coronavirus- horror-state – High Alert