ಮೈಸೂರು,ನವೆಂಬರ್,9,2022(www.justkannada.in): ನವೆಂಬರ್ 14ರಿಂದ ನವೆಂಬರ್ 19 ರವರೆಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ “ಪಾಲಿಕೆ ಅದಾಲತ್” ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಸೂರು ಮೇಯರ್ ಶಿವಕುಮಾರ್ ಮನವಿ ಮಾಡಿದರು.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಮೇಯರ್ ಶಿವಕುಮಾರ್ ಹೇಳಿದ್ಧಿಷ್ಟು…
ಈ ಪಾಲಿಕೆ ಅದಾಲತ್ ಎಂಬುದು ನಾಗರೀಕ ಸನ್ನದುಗಳು ಮತ್ತು ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಅಥವಾ ಅವುಗಳ ಸಂಬಂಧ ದೂರುಗಳು ಏನಾದರೂ ಇದ್ದಲ್ಲಿ ಅವುಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಒಂದು ವೇದಿಕೆಯನ್ನು ಕಲ್ಪಿಸುವ ಕಾರ್ಯಕ್ರಮ ಮಾತ್ರ ಆಗಿರುತ್ತದೆ ಎಂದರು.
ಪಾಲಿಕೆ ಅದಾಲತ್ ನಲ್ಲಿ ಹೊಸದಾಗಿ ವಾಸಕ್ಕೆ ನಿವೇಶನ ಅಥವಾ ಮನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಸಂಬಂಧ ಆಶ್ರಯ ಯೋಜನೆಯಡಿ ಅಧಿಕೃತ ಪ್ರಕಟಣೆ ಹೊರಡಿಸಿ ಅರ್ಜಿಗಳನ್ನು ಕರೆದಾಗ ಮಾತ್ರ ಅರ್ಜಿ ಸಲ್ಲಿಸಿಕೊಳ್ಳಬೇಕಾಗಿರುತ್ತದೆ. ಹಾಗೆಯೇ ಪಾಲಿಕೆ ಆದಾಲತ್ ಕಾರ್ಯಕ್ರಮದಲ್ಲಿ ಈಗಾಗಲೇ ವಲಯ ಕಚೇರಿಗಳಲ್ಲಿ ಅಥವಾ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಯಾವುದೇ ನಾಗರೀಕ ಸನ್ನದುಗಳನ್ನು ಅಥವಾ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಕೋರಿ ಈ ಹಿಂದೆಯೇ ಅರ್ಜಿದಾರರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದು ಈ ಸಂಬಂಧ ಪಾಲಿಕೆ ಅಧಿಕಾರಿ/ಸಿಬ್ಬಂದಿಗಳು ನಿಗಧಿತ ವೇಳೆಯಲ್ಲಿ ಅರ್ಜಿಯಲ್ಲಿನ ಮನವಿ ಅಥವಾ ದೂರುಗಳಿಗೆ ಸ್ಪಂದಿಸದೆ ಅನಗತ್ಯ ವಿಳಂಬ ಮಾಡಿದ್ದಲ್ಲಿ ಅಥವಾ ಹೊಸ ಸಾರ್ವಜನಿಕ ಸಮಸ್ಯೆಗಳು ಮತ್ತು ದೂರುಗಳೇನಾದರೂ ಇದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಪಾಲಿಕೆ ಅದಾಲತ್ ಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ದಿನಾಂಕ 14-11-2022 ರಿಂದ 19-11-2022 ರವರೆಗೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ದಾಖಲಾತಿಗಳನ್ನು ಒದಗಿಸಿದಲ್ಲಿ ದಿನಾಂಕ : 27-11-2022 ರೊಳಗಾಗಿ ಇತ್ಯರ್ಥಪಡಿಸಲು ಅಥವಾ ಅಗತ್ಯ ಹಿಂಬರಹವನ್ನು ಅರ್ಜಿದಾರರಿಗೆ ತಲುಪಿಸಲು ಕ್ರಮವಹಿಲಾಗುವುದು. ಸೂಕ್ತ ಸಮಜಾಯಿಷಿ ಅಥವಾ ಹಿಂಬರಹ ತಲುಪದೆ ಇದ್ದಲ್ಲಿ ಅರ್ಜಿದಾರರು ದಿನಾಂಕ : 30-11-2022 ರಂದು ನಡೆಯುವ ಅಂತಿಮ ಅದಾಲತ್’ ಕಾರ್ಯಕ್ರಮಕ್ಕೆ ಅರ್ಜಿ ಸ್ವೀಕೃತಿಯೊಂದಿಗೆ ಹಾಜರಾಗಬಹುದಾಗಿದೆ. ಅರ್ಜಿದಾರರು ಆದಾಲತ್ ಅರ್ಜಿಗಳನ್ನು ಪಾಲಿಕೆಯಿಂದ ನೀಡುವ ನಿಗಧಿತ ಅರ್ಜಿ ನಮೂನೆಯಲ್ಲಿಯೇ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.
ಅರ್ಜಿದಾರರು ಅರ್ಜಿಗೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳನ್ನು ತಪ್ಪದೇ ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಮೇಯರ್ ಶಿವಕುಮಾರ್ ತಿಳಿಸಿದರು. ಹಾಗೆಯೇ ಪಾಲಿಕೆ ಆದಾಲತ್ ನಲ್ಲಿ ಈ ಕೆಳಕಂಡ ನಾಗರೀಕ ಸನ್ನದು ಅಥವಾ ಸೇವಾ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಎ) ನಿವೇಶನ / ಮನೆ ಖಾತಾ ವರ್ಗಾವಣೆ (ನೊಂದಣೆ ಪ್ರಕರಣಗಳು).
ಬಿ) ಮನೆ (ನಿವೇಶನ ಕಂದಾಯ ನಿಗಧಿಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳು)
ಸಿ) ಆಶ್ರಯ ಯೋಜನೆಯಡಿ (ಚಾಮರಾಜ ನರಸಿಂಹರಾಜ, ಕೃಷ್ಣರಾಜ ಕ್ಷೇತ್ರ) ಈಗಾಗಲೇ ಮನೆ/ನಿವೇಶನ ಮಂಜೂರಾಗಿದ್ದು ಸ್ವಾಧೀನ ಪತ್ರ, ಹಕ್ಕು ಪತ್ರ, ಹಕ್ಕು ಖುಲಾಸೆ ಪತ್ರ, ಖಾತೆ ನೊಂದಣಿ /ವರ್ಗಾವಣೆ ಕೋರಿ ಸಲ್ಲಿಸಿರುವ ಪ್ರಕರಣಗಳು
ಡಿ) ಕಟ್ಟಡ ನಿರ್ಮಾಣ ನಕ್ಷೆ ಕೋರಿ. (Building Plan)
ಇ) ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಕೋರಿ (ಸಿ.ಆರ್).
ಈ) ವಾಣಿಜ್ಯ ಪರವಾನಗಿ (Trade Licence) ಕೋರಿ.
ಉ) ಜಾಹಿರಾತು ಪ್ರಕಟಣೆ ಫಲಕ ಅರ್ಜಿ.
ಊ) ಜನನ ಮತ್ತು ಮರಣ ಧೃಡೀಕರಣ ಕೋರಿ.
ಋ) ಇತರೇ ಸೇವಾ ಸೌಲಭ್ಯಗಳು
ಈ ಮೇಲಿನ ಪ್ರಕರಣಗಳಿಗೆ ಈಗಾಗಲೇ ಸಂಬಂಧಪಟ್ಟ ವಲಯ ಕಚೇರಿ ಹಾಗೂ ಮುಖ್ಯ ಕಚೇರಿಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ವಿಳಂಬವಾಗಿರುವ ಪ್ರಕರಣಗಳಲ್ಲಿ ಮಾತ್ರ ಅರ್ಜಿ ಸ್ವೀಕೃತಿ ಮತ್ತು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವುದು ಹಾಗೂ ಸಾರ್ವಜನಿಕರು ಸದರಿ ಅದಾಲತ್ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೆಯೇ ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಂ ಮೊಬೈಲ್ ಸಂಖ್ಯೆ: 944984196 ಸಂಪರ್ಕಿಸಬಹುದು ಎಂದು ಮೇಯರ್ ಶಿವಕುಮಾರ್ ಹೇಳಿದರು.
Key words: Corporation- Adalat –nov 14th – 19th-mysore Mayor -Shivakumar