ಬೆಂಗಳೂರು,ಜು,28,2020(www.justkannada.in): ಸಚಿವಕಾಂಕ್ಷಿಯಾಗಿದ್ದ ತಮಗೆ ನಿಗಮ ಮಂಡಳಿ ಸ್ಥಾನ ನೀಡಿ ಸಮಾಧಾನಕ್ಕೆ ಮುಂದಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಬಗ್ಗೆ ಬಿಜೆಪಿ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನೆಷ್ಟು ದಿನ ಸಮಾಧಾನ ಸುಧಾರಿಸಿಕೊಳ್ಳಲು ಸಾಧ್ಯ..? ಇಷ್ಟು ವರ್ಷ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ನಾನು ರಾಜಕೀಯ ಜೀವನಕ್ಕೆ ಬಂದಿದ್ದು ತಪ್ಪು ಎನ್ನಿಸುತ್ತಿದೆ ಎಂದು ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ನಿಗಮ ಮಂಡಳಿ ಸ್ಥಾನ ಕೊಟ್ಟು ನನಗೆ ಅಪಮಾನ ಮಾಡಿದ್ದಾರೆ. ಸಿಎಂ ಬಿಎಸ್ ವೈ ಗೆ ನನ್ನ ಬಗ್ಗೆ ಮಾಹಿತಿ ಕೊರತೆ ಇರಬಹುದು. ನಿನ್ನೆ ಸಿಎಂ ಮನೆಗೆ ಕರೆ ಮಾಡಿದ್ದೆ. ಆ ವೇಳೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಾಪಸ್ ಪಡೆದಿರುವುದಾಗಿ ಹೇಳಿದ್ರು. ನನಗೆ ಸಚಿವನಾಗುವ ಆಸೆ ಇಲ್ಲ. ಜನಸೇವೆ ಮಾಡಿಕೊಂಡು ಹೋಗುತ್ತೇನೆ. ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ ಎನ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿನ್ನೆ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಿಎಂ ಬಿಎಸ್ ಯಡಿಯೂರಪ್ಪ ಅದೇಶ ಹೊರಡಿಸಿದ್ದರು. ನಂತರ ಕೆಲ ಶಾಸಕರು ನಿಗಮಮಂಡಳಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸಿಎಂ ಬಿಎಸ್ ವೈ ನಾಲ್ಕು ಶಾಸಕರ ನಿಗಮಮಂಡಳಿ ಅಧ್ಯಕ್ಷ ಸ್ಥಾನ ವಾಪಸ್ ಪಡೆದಿದ್ದರು.
Key words: corporation board – insult-Outrage- BJP MLA- GH Thippareddy