ಬೆಂಗಳೂರು,ಅ,25,2019(www.justkannada.in): ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಂಗಳೂರಿನಲ್ಲಿ ರಸ್ತೆ ಸುಧಾರಣೆ ಹೆಸರಿನಲ್ಲಿ ಕೈಗೆತ್ತಿಕೊಂಡ ವೈಟ್ ಟಾಪಿಂಗ್ ಕಾಮಗಾರಿ ಭಾರೀ ಭ್ರಷ್ಟಾಚಾರದಿಂದ ಕೂಡಿದ್ದು, ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಆಶ್ವಥ್ ನಾರಾಯಣ್ ಒತ್ತಾಯಿಸಿದರು.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್, ಬಿಬಿಎಂಪಿ ಮಾಜಿ ಉಪ ಮೇಯರ್ ಎಸ್.ಹರೀಶ್, ಬೆಂಗಳೂರು ನಗರ ವಕ್ತಾರ ಎನ್.ಆರ್. ರಮೇಶ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಆಶ್ವಥ್ ನಾರಾಯಣ್, ವೈಟ್ ಟಾಪಿಂಗ್ ಭ್ರಷ್ಟ ಕೆಲಸದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮಂತ್ರಿಗಳಾದ ಕೆ.ಜೆ. ಜಾರ್ಜ್ ಮತ್ತು ರಾಮಲಿಂಗಾರೆಡ್ಡಿ ನೇರ ಭಾಗಿಯಾಗಿದ್ದು ಈ ಯೋಜನೆಯಿಂದ ಬಂದ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ‘ ಕಪ್ಪಹಣ’ವಾಗಿ ನೀಡಿದ್ದಾರೆ ಎಂದು ನೇರ ಆರೋಪ ಮಾಡಿದರು.
ಇದೇ ವೇಳೆ ಬಿಜೆಪಿ ಮುಖಂಡ ಎಸ್. ಹರೀಶ್ ಮಾತನಾಡಿ, ವೈಟ್ ಟಾಪಿಂಗ್ ಕರ್ಮಕಾಂಡಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇರ ಭಾಗಿಯಾಗಿದ್ದಾರೆ. ತಾಂತ್ರಿಕ ಗುಣಮಟ್ಟದಲ್ಲಿ ದಿನೇಶ್ ಗುಂಡೂರಾವ್ ಗುತ್ತಿಗೆದಾರರೊಂದಿಗೆ ರಾಜಿಯಾಗಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ಇದರ ಸಮಗ್ರ ತನಿಖೆಗೆ ಒತ್ತಾಯಿಸಿ ಸಾಮರ್ಥ್ಯ ಇದ್ದರೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ದಿನೇಶ್ ಗುಂಡೂರಾವ್ ಗೆ ಎಸ್. ಹರೀಶ್ ಸವಾಲು ಹಾಕಿದರು.
ಗಾಂಧಿನಗರ ಕ್ಷೇತ್ರದಲ್ಲಿ ಕಿ.ಮೀ ವೈಟ್ ಟಾಪಿಂಗ್ ರಸ್ತೆಗೆ 15.17ಕೋಟಿ ಖರ್ಚು ಮಾಡಿ ಗುತ್ತಿಗೆದಾರರಿಗೆ ಕಾಮಗಾರಿ ಅಪೂರ್ಣ ಆಗಿದ್ದರೂ ಪಾವತಿಸಲಾಗಿದೆ ದಿನೇಶ್ ಗುಂಡೂರಾವ್ ಅವರಿಗೂ ಅಮೃತ ಗುತ್ತಿಗೆ ಸಂಸ್ಥೆಗೂ ಅವಿನಾಭಾವ ಸಂಬಂಧ ಇರುವುದು ಅನೇಕ ಪ್ರಸಂಗಗಳಲ್ಲಿ ರುಜುವಾತಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಎನ್. ಆರ್. ರಮೇಶ್ ಮಾತನಾಡಿ, ಮೊದಲ ಹಂತದ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಎಲ್ಲೂ ಯುಟಿಲಿಟಿ ಶಿಫ್ಟ್ ಆಗಿಲ್ಲ. ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ನ ಮಾಜಿ ಮೇಯರ್ ಗಳು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಮಾಜಿ ಮೇಯರ್ ಜಿ. ಪದ್ಮಾವತಿ, ಎಂ.ರಾಮಚಂದ್ರಪ್ಪ, ಮಾಜಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜು, ಹಾಲಿ ನಾಯಕ ಅಬ್ದುಲ್ ವಾಜೀದ್ ಅವರುಗಳು ಪಾಲಿಕೆಯ ಅನುದಾನಗಳನ್ನು ಗುಳುಂ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಮುಂದುವರೆದು ಮಾತನಾಡಿದ ಎನ್.ಆರ್. ರಮೇಶ್, ‘ ಎಲ್ಲಾ ಯೋಜನೆಗಳಲ್ಲಿ ಆಗಿರುವ ಅವ್ಯವಹಾರಗಳನ್ನು ಬಯಲಿಗೆ ತಂದಿದ್ದೇವೆ. ಇದರ ವಿರುದ್ದ ನಿರಂತರ ಹೋರಾಟ ಮುಂದುವರೆಯುತ್ತದೆ. ವೈಟ್ ಟಾಪಿಂಗ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರಗಳು ಮತ್ತು ತಿಂದಿರುವ ಹಣ ಎಷ್ಟು ಎಂಬುದರ ಬಗ್ಗೆ ಮೂರು ತಿಂಗಳಲ್ಲಿ ಸತ್ಯ ಬಯಲಾಗಲಿದೆ ಎಂದು ಟಾಂಗ್ ನೀಡಿದರು.
Key words: Corruption -white topping- work – Siddaramaiah period-BJP leaders -investigation.