ಮೈಸೂರು,ಅ,8,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ರವಾನೆ ಮಾಡಲಾಗುತ್ತಿದೆ.
ಇಂದು ಜಂಬೂ ಸವಾರಿ ಮೆರವಣಿಗೆ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಕ್ಯಾಪ್ಟನ್ ಅರ್ಜುನನಿಗೆ ಚಿನ್ನದ ಅಂಬಾರಿ ಕಟ್ಟಲಾಗುತ್ತದೆ. ಬಳಿಕ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಅರ್ಜುನ ಸಾಗಲಿದ್ದು ಅಂಬಾರಿಯಲ್ಲಿನ ಚಾಮುಂಡೇಶ್ವರಿ ತಾಯಿಗೆ ಸಿಎಂ ಬಿಎಸ್ ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 2.15ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಆ ನಂತರ ಸಂಜೆ 4.31ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಚಾಲನೆ ಸಿಗಲಿದೆ. ಅರಮನೆ ಒಳಾಂಗಣದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡದೇವಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ,ಕಮಿಷನರ್ ಕೆ.ಟಿ.ಬಾಲಕೃಷ್ಣ ಪುಷ್ಪಾರ್ಚನೆಗೆ ಸಾಥ್ ನೀಡಲಿದ್ದಾರೆ.
ನಂತರ ಕ್ಯಾಪ್ಟನ್ ಅರ್ಜುನ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದು ಉಳಿದ ಆನೆಗಳು ಅರ್ಜುನನಿಗೆ ಸಾಥ್ ನೀಡಲಿವೆ. ಜಂಬೂ ಸವಾರಿ ಮೆರವಣಿಗೆ ಜಯಚಾಮರಾಜೇಂದ್ರ ವೃತ್ತ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ವೃತ್ತ, ಆಯುರ್ವೇದ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ತಲುಪಲಿದೆ. ಜಂಬೂ ಸವಾರಿ ಮೆರವಣಿಗೆಯನ್ನ ಪ್ರವಾಸಿಗರು ನೋಡಿ ಕಣ್ತುಂಬಿಕೊಳ್ಳಲಿದ್ದಾರೆ.
ಇನ್ನು ಉತ್ಸವ ಮೂರ್ತಿ ಚಾಮುಂಡಿ ಬೆಟ್ಟದಿಂದ ಅರಮನೆಯತ್ತ ರವಾನಿಸುವ ಕಾರ್ಯ ನಡೆಯುತ್ತಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲು ಚಾಮುಂಡಿ ವಿಗ್ರಹ ಸಿದ್ಧವಾಗಿದ್ದು, ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ವಿಗ್ರಹ ಸಾಗಲಿದೆ. ಇನ್ನು ಹಸಿರು ಕೆಂಪು ಬಣ್ಣದ ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ ಕಙಂಗೊಳಿಸುತ್ತಿದ್ದಾಳೆ.
Key words: Countdown – Mysore Dasara-2019- Jumbo ride