ಬೆಂಗಳೂರು, ಆ. 17,2021(www.justkannada.in): ರೇಷ್ಮೆ ಮಾರುಕಟ್ಟೆಯಲ್ಲಿ ಲೂಟಿ ಮಾಡುವ ದಂಧೆಗೆ ಇನ್ನೂ ಕಡಿವಾಣ ಹಾಕಿಲ್ಲ. ನಾನು ಈ ಹಿಂದೆ ರೇಷ್ಮೆ ಸಚಿವನಾಗಿದ್ದಾಗಲೇ ಇ- ಪೇಮೆಂಟ್ ಗೆ ಸಿದ್ದತೆ ಮಾಡಲಾಗಿತ್ತು. ಈವರೆಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಯಾಕೆ ಎಂದು ರೇಷ್ಮೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳ ವಿರುದ್ಧ ಗರಂ ಆದರು. ಇ – ಪೇಮೆಂಟ್ ತಕ್ಷಣ ಆರಂಭವಾಗಬೇಕು ಎಂದು ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಿಕಾಸ ಸೌಧದಲ್ಲಿ ಇಂದು ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ನಾರಾಯಣಗೌಡ, ಅಧಿಕಾರಿಗಳ ವಿಳಂಬ ನೀತಿಗೆ ಅಕ್ರೋಶ ವ್ಯಕ್ತಪಡಿಸಿದರು. ಕೆಲಸ ಮಾಡುವ ಮನಸ್ಸಿಲ್ಲದಿದ್ದರೆ ಸ್ವಯಂ ನಿವೃತ್ತಿ ಪಡೆಯಿರಿ. ಕೆಲಸ ಮಾಡಲು ಅಸಕ್ತಿ ಇರುವ ಸಾಕಷ್ಟು ಜನರಿದ್ದಾರೆ. ಹಣ ಮಾಡಲು ಸಚಿವನಾಗಿ ಬಂದಿಲ್ಲ. ವರ್ಷದ ಹಿಂದೆ ಹೇಳಿದ್ದ ಕೆಲಸ ಇನ್ನೂ ಜಾರಿಗೆ ತಂದಿಲ್ಲ. ಏನು ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದರು. ಇ-ಟೆಂಡರ್ 100% ಆಗಬೇಕು. ಅದೇ ರೀತಿ ಇ- ಪೇಮೆಂಟ್ ಕೂಡ 100% ಆಗಬೇಕು. ಕೆಲವು ಮಾರುಕಟ್ಟೆಯಲ್ಲಿ ಇ- ಪೇಮೆಂಟ್ ಇದ್ದರೂ, ಪರ್ಯಾಯವಾಗಿ ನಗದು ವ್ಯವಹಾರ ಕೂಡ ಇದೆ. ಒಂದು ರೂಪಾಯಿ ವ್ಯವಹಾರ ಕೂಡ ನಗದು ರೂಪದಲ್ಲಿ ಆಗಬಾರದು ಎಂದು ಸಚಿವ ನಾರಾಯಣಗೌಡ ಸ್ಪಷ್ಟ ಸೂಚನೆ ನೀಡಿದರು.
ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆ ಆಗಬೇಕು. ಹಾಗೂ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ ಆಗಬೇಕು. ಸಿಲ್ಕ್ & ಮಿಲ್ಕ್ ರೈತರಿಗೆ ಜೀವನಾಧಾರವಾಗಿದೆ. ಹೆಣ್ಣುಮಕ್ಕಳು ಶ್ರಮವಹಿಸಿ ರೇಷ್ಮೆ ಬೆಳೆಯುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ವರ್ಷದಲ್ಲಿ ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಶೇ 50 ರಷ್ಟು ರೇಷ್ಮೆ ಉತ್ಪಾದನೆ ನಮ್ಮ ಗುರಿ
ದೇಶದಲ್ಲಿ 23820 ಮೆ.ಟನ್ ರೇಷ್ಮೆ ಉತ್ಪಾದನೆ ಇದೆ. ಆ ಪೈಕಿ ರಾಜ್ಯದಲ್ಲಿಯೇ 11292 ಮೆ.ಟನ್ ರೇಷ್ಮೆ ಉತ್ಪಾದನೆ ಆಗುತ್ತಿದೆ. ದೇಶದ ಒಟ್ಟೂ ಉತ್ಪಾದನೆಯ ಶೇ. 47 ರಷ್ಟು ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದೆ. ಇದು ಶೇ. 50 ರಷ್ಟಕ್ಕೆ ಏರಬೇಕು. ಒಂದು ವರ್ಷದಲ್ಲಿ ಈ ಗುರಿಯನ್ನು ತಲುಪಬೇಕು. ರೇಷ್ಮೆ ಬೆಳೆಯುವ ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಿ ಈ ಗುರಿಯನ್ನು ಮುಟ್ಟುವಂತೆ ಮಾಡಬೇಕು ಎಂದು ಹೇಳಿದರು. ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್ ನವರು ತಿಂಗಳಿಗೆ 500 kg ಯಷ್ಟು ರೇಷ್ಮೇಯನ್ನು ಹೊರಗಡೆಯಿಂದ ಖರೀದಿಸುತ್ತಿದ್ದಾರೆ. ಇನ್ನುಮುಂದೆ ಇಲಾಖೆಯ ಮಾರುಕಟ್ಟೆಯಿಂದಲೇ ಖರೀದಿಸಬೇಕು. ಗುಣಮಟ್ಟದ ರೇಷ್ಮೆ ನಮ್ಮಲ್ಲಿಯೇ ಸಿಗುತ್ತದೆ. ಕಡ್ಡಾಯವಾಗಿ ಇಲಾಖೆಯಿಂದಲೇ ಖರೀದಿಸಬೇಕು ಎಂದು ಸಚಿವ ನಾರಾಯಣಗೌಡ ಸೂಚಿಸಿದರು.
ರೇಷ್ಮೆ ಇಲಾಖೆ ಯೋಜನೆಗಳ ವಿವರ ರೈತರಿಗೆ ಸಿಗುವಂತೆ ಮಾಡಲು ಪ್ರತ್ಯೇಕ ಆ್ಯಪ್ ರಚನೆ ಮಾಡಬೇಕು. ಏರ್ ಪೋರ್ಟ್ ನಂತ ಪ್ರಮುಖ ಸ್ಥಳಗಳಲ್ಲಿ ರೇಷ್ಮೆ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಪ್ರತಿ ಜಿಲ್ಲೆಗಳಿಗೆ ಭೇಟಿ ಕೊಡಬೇಕು. 24 ರೊಳಗೆ ಮಾಹಿತಿ ಕೊಡಬೇಕು. 25 ರಂದು ಜಿಲ್ಲಾವಾರು ಪ್ರಗತಿ ಪರಿಶೀಲನೆ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ನವದೆಹಲಿ, ಏರ್ಪೋರ್ಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರೇಷ್ಮೆ ಮಾರುಕಟ್ಟೆ ಮಳಿಗೆ ತೆರೆಯಲು ತೀರ್ಮಾನಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ತಿಳಿಸಿದರು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ವಿ ಅಮರಶೆಟ್ಟಿ, ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: country- Our goal – produce 50 percent – silk –minister-Dr. Narayana Gowda