ಯುಕೆಯಲ್ಲಿ ಜನಿಸಿದ ಶಿಶುವಿಗೆ ‘ಪಕೋಡ’ ಹೆಸರಿಟ್ಟ ದಂಪತಿ: ಫುಲ್ ವೈರಲ್

ನವದೆಹಲಿ, ಸೆಪ್ಟೆಂಬರ್ ,6, 2022(www.justkannada.in): ಮಕ್ಕಳಿಗೆ ನಾಮಕರಣ ಮಾಡುವುದು ಪೋಷಕತ್ವದ ಒಂದು ಬಹುಮುಖ್ಯವಾದ ಭಾಗ. ಹೆಸರು ವ್ಯಕ್ತಿಗೆ ಗುರುತನ್ನು ಒದಗಿಸುತ್ತದೆ. ಆದ್ದರಿಂದಲೇ ಬಹುಪಾಲು ಪೋಷಕರು ತಮ್ಮ ಮಕ್ಕಳಿಗೆ ನಾಮಕರಣ ಮಾಡಲು, ಶಿಶು ಜನಿಸಿದ ಕೂಡಲೇ ವಿವಿಧ ರೀತಿ ಪ್ರಯತ್ನಗಳನ್ನು ಮಾಡುತ್ತಾರೆ.

ಕೆಲವು ದಂಪತಿಗಳು ತಮ್ಮ ಕುಟುಂಬದ ಹಿರಿಯರು, ಸ್ನೇಹಿತರು ಅಥವಾ ತಮ್ಮ ಮಾರ್ಗದರ್ಶಿಗಳ ಸಹಾಯ ಕೋರಿದರೆ, ಮತ್ತೆ ಕೆಲವರು ಎಲ್ಲಿಂದಲೋ ಪ್ರೇರಣೆ, ಪ್ರಭಾವ ಹಾಗೂ ತಮ್ಮ ಮೆಚ್ಚಿನ ಹೆಸರುಗಳನ್ನು ಇಡುತ್ತಾರೆ. ಒಂದು ಕಾಲದಲ್ಲಿ ಶಿಶುವಿನ ಜನನದ ನಿರೀಕ್ಷೆಯಲ್ಲಿರುವ ಪೋಷಕರು ಅಥವಾ ಹೊಸ ಪೋಷಕರು ತಮ್ಮ ಮಗುವಿಗೆ ನಾಮಕರಣ ಮಾಡಲು ಪುಸ್ತಕಗಳ ಮೊರೆ ಹೋಗುತ್ತಿದ್ದರು. ಆದರೆ ಈಗ ಆ ಅಭ್ಯಾಸ ಇಂಟೆರ್‌ ನೆಟ್ ಅನ್ನು ಕಿತ್ತುಕೊಂಡಿದೆ. ಇಂಟೆರ್‌ ನೆಟ್‌ ನಲ್ಲಿ ನಿಮಗೆ ನಿಮ್ಮ ಅಗತ್ಯದ ಪ್ರಕಾರ ಅನೇಕ ಹೆಸರುಗಳ ಕ್ಯಾಟಲಾಗ್‌ ಗಳು ಲಭಿಸುತ್ತವೆ.

ಆದರೆ ಈಗಿನ ತಾಂತ್ರಿಕ ಯುಗದಲ್ಲಿಯೂ ಸಹ ಮಗುವಿಗೆ ಹೆಸರನ್ನು ಇಡುವ ಪ್ರಕ್ರಿಯೆಯಲ್ಲಿ ತಮ್ಮ ಮೆಚ್ಚಿನ, ಅಥವಾ ಅಪರೂಪದ ಹೆಸರಿನ ಹುಡುಕಾಟ ಪೋಷಕರ ಪಾಲಿಗೆ ಅಷ್ಟು ಸುಲಭವಲ್ಲ. ಮಕ್ಕಳಿಗೆ ಹೆಸರಾಂತ ವ್ಯಕ್ತಿ, ಸ್ಮಾರಕ, ಸ್ಥಳ ಅಥವಾ ಕಾಲ್ಪನಿಕ ವ್ಯಕ್ತಿಯ ಹೆಸರುಗಳನ್ನು ಇಟ್ಟಿರುವುದು ನೀವು ನೋಡಿರುತ್ತೀರಾ, ಅಥವಾ ಕಂಡಿರುತ್ತೀರಾ. ಆದರೆ ತಮ್ಮ ಮಕ್ಕಳಿಗೆ ಪೋಷಕರು ತಮ್ಮ ಮೆಚ್ಚಿನ ತಿನಿಸುಗಳ ಹೆಸರನ್ನು ಇಟ್ಟಿರುವ ಕುರಿತು ಎಲ್ಲಾದರೂ ಕೇಳಿರುವಿರಾ?

ಯುಕೆ ದೇಶದಲ್ಲಿ ವಾಸಿಸುತ್ತಿರುವ ಓರ್ವ ದಂಪತಿ ತಮ್ಮ ನವಜಾತ ಶಿಶುವಿಗೆ ಭಾರತದ ಅತ್ಯಂತ ಜನಪ್ರಿಯ ತಿನಿಸಾದ ‘ಪಕೋಡ’ ಎಂದು ನಾಮಕರಣ ಮಾಡಿದ್ದಾರೆ. ಪಕೋಡ ಎಂದರೆ ಕಡಲೇ ಹಿಟ್ಟಿನಲ್ಲಿ ತರಕಾರಿ ಅಥವಾ ಮಾಂಸದ ತುಂಡುಗಳನ್ನು ತುಂಬಿ, ಎಣ್ಣೆಯಲ್ಲಿ ಕರಿದು ತಯಾರಿಸುವ ಖಾದ್ಯ. ಇದು ನಮ್ಮ ದೇಶದಲ್ಲಿ ಬಹಳ ಜನಪ್ರಿಯ ತಿನಿಸು.

ಐರ್‌ ಲ್ಯಾಂಡ್‌ ನಲ್ಲಿರುವ ಒಂದು ಜನಪ್ರಿಯ ಹೋಟೆಲ್ ‘ದಿ ಕ್ಯಾಪ್ಷಿಯನ್ಸ್ ಟೇಬಲ್,’ ಈ ಕುರಿತು ತಮ್ಮ ಇಂಟೆರ್‌ ನೆಟ್ ಪ್ರೇಕ್ಷಕರಿಗೆ ಮಾಹಿತಿ ನೀಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ ಐ ವರದಿ ಮಾಡಿದೆ. ಆ ಮಗುವಿನ ಪೋಷಕರು ಆ ಹೋಟೆಲ್‌ ನ ಮಾಮೂಲಿ ಗಿರಾಕಿಗಳಂತೆ. ತಮ್ಮ ಮಗುವಿಗೆ ಭಾರತದ ಈ ಅತ್ಯಂತ ಜನಪ್ರಿಯ ಖಾದ್ಯದ ಹೆಸರನ್ನು ಇಟ್ಟಿರುವುದನ್ನು ಆ ಹೋಟೆಲ್ ತನ್ನ ಸಾಮಾಜಿಕ ತಾಣದಲ್ಲಿ ಘೋಷಿಸಿರುವುದು ಅಲ್ಲೆಲ್ಲ ವೈರಲ್ ಆಗಿದೆ.

ನವಜಾತ ಶಿಶುವಿನ ಒಂದು ಚಿತ್ರವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗಿದೆ. ಪೋಷಕರು ನಾಮಕರಣ ಸಂದರ್ಭದಲ್ಲಿ ಆ ಹೋಟೆಲ್‌ ಗೆ ತೆರಳಿ ತಾವು ತಿನ್ನಲು ಆರ್ಡರ್ ಮಾಡಿದ ಸಂಪೂರ್ಣ ಖಾದ್ಯಗಳ ಹೆಸರಿನ ರಸೀದಿಯನ್ನೂ ಸಹ ಅವರು ಹಂಚಿಕೊಂಡಿದ್ದು, ಅದರಲ್ಲಿ ‘ಪಕೋಡ’ ಸಹ ಸೇರಿದೆ.

ಇದಕ್ಕೆ ಇಂಟೆರ್‌ ನೆಟ್ ಬಳಕೆದಾರರು ಪೋಷಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಕೆಲವರು ಆ ಹೆಸರನ್ನು ನೋಡಿ  ಟ್ವೀಟ್ ಮಾಡಿದ್ದಾರೆ. ಅದರಲ್ಲಿನ ಒಂದು ಸಂದೇಶ ಹೀಗಿದೆ: “ಆ ಮಗು ಭಾರತದಲ್ಲಿದ್ದರೆ ಮಳೆಗಾಲದಲ್ಲಿ ಹೊರಗೆ ಬರಬಾರದು… ಏಕೆಂದರೆ ಎಲ್ಲರೂ ಅವನನ್ನು ತಿಂದುಬಿಡುತ್ತಾರೆ.”

“ನಿಜಕ್ಕೂ ಬೇಬಿ ಪಕೋಡ ಬಗ್ಗೆ ನಾವು ಹೆಮ್ಮೆ ಪಡಬಹುದಲ್ಲವೇ,” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಸುದ್ದಿ ಮೂಲ: ಟೈಮ್ಸ್ ನೌ

Key words: Couple- Name- Pakoda- Baby – UK