ಬೆಂಗಳೂರು,ಏಪ್ರಿಲ್,18,2023(www.justkannada.in): ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ಅಂತ್ಯಗೊಂಡಿತ್ತು. ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ವೇಳೆ ಕುಲಕರ್ಣಿ ಪರ ವಕೀಲರಾದ ಸಿ ಹೆಚ್ ಹನುಮಂತರಾಯ, ಚುನಾವಣೆಗೆ ನಾಮಪತ್ರ ಸಲ್ಲಿಸಿ ಪ್ರಚಾರ ನಡೆಸಬೇಕಿದೆ. ಹೀಗಾಗಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವಂತೆ ವಾದ ಮಂಡಿಸಿದ್ದರು.
ಧಾರವಾಡದಲ್ಲಿ ಯೋಗೀಶ್ ಗೌಡ ಹತ್ಯೆ ಪ್ರಕರಣದ 90 ಸಾಕ್ಷಿಗಳಿದ್ದಾರೆ. ವಿನಯ್ ಕಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದರೆ ಪ್ರಕರಣಕ್ಕೆ ಸಮಸ್ಯೆಯಾಗಬಹುದು. ಸೂಚಕರ ಮೂಲಕವೇ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು.
ವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿನಯ್ ಕುಲಕರ್ಣಿ ಅವರ ಅರ್ಜಿ ವಜಾಗೊಳಿಸಿದೆ. ಇದರಿಂದ ವಿನಯಕ್ ಕುಲಕರ್ಣಿ ಅವರು ಕ್ಷೇತ್ರದಿಂದ ಹೊರಗಿದ್ದುಕೊಂಡೇ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Key words: court -dismissed – petition – Congress candidate -Vinay Kulkarni – Dharwad.