ಬೆಂಗಳೂರು,ಜೂನ್,14,2022(www.justkannada.in): ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ಶಾಲೆಗಳ 31 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿದೆ.
ದಾಸರಹಳ್ಳಿ ವಲಯದ 2 ಶಾಲೆಗಳಲ್ಲಿ ಸುಮಾರು 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪೀಣ್ಯ 2ನೇ ಹಂತದಲ್ಲಿರುವ ಖಾಸಗಿ ಶಾಲೆಯಲ್ಲಿ 6ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಮತ್ತು ರಾಜಗೋಪಾಲನಗರದ ಖಾಸಗಿ ಶಾಲೆಯ 4 ಮತ್ತು 5ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.
ವಿದ್ಯಾರ್ಥಿಗಳಿಗೆ ಜೂನ್ 9ರಂದು ಸೋಂಕು ದೃಢಪಟ್ಟಿದೆ. ಮಕ್ಕಳಿಗೆ ಕೊರೊನಾ ತಗುಲಿರುವ ಕಾರಣ 2 ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಬಿಬಿಎಂಪಿ ಅಧಿಕಾರಿಗಳು, ಸದ್ಯಕ್ಕೆ ಎಲ್ಲಾ ಮಕ್ಕಳಿಗೂ ಮತ್ತು ಶಾಲಾ ಸಿಬ್ಬಂದಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಶಾಲೆಗಳನ್ನ ಕಂಟೈನ್ಮೆಂಟ್ ಅಂತಾ ಘೋಷಣೆ ಮಾಡಲಾಗಿದೆ. ಪಾಸಿಟಿವ್ ಆಗಿರುವ ಮಕ್ಕಳು ಎಲ್ಲರೂ ಕೂಡ ಆರಾಮಾಗಿ ಇದ್ದಾರೆ, ಆತಂಕ ಪಡುವಂತಹದಿಲ್ಲ ಎಂದು ಹೇಳಿದ್ದಾರೆ.
Key words: covid-19 -31 students- two schools – Bangalore.