ಮೈಸೂರು,ಜನವರಿ,1,2020(www.justkannada.in): ಕೊರೋನಾ ಮಹಾಮಾರಿ ತಡೆಗೆ ಕೋವಿಡ್ ಲಸಿಕೆ ತಯಾರಿಕೆಯ ಬೆಳವಣಿಗೆಯೂ ವಿವಿಧ ಹಂತದಲ್ಲಿದ್ದು ಈ ಮಧ್ಯೆ ದೇಶದಲ್ಲಿ ನಾಳೆಯಿಂದ ಕೋವಿಡ್-19 ಲಸಿಕೆ ಅಣಕು ಕಾರ್ಯಾಚರಣೆ ನಡೆಯಲಿದೆ.
ಕರ್ನಾಟಕದ 5 ಜಿಲ್ಲೆಗಳನ್ನು ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಯಲಿದೆ. ಆ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ನಡೆಯಲಿದೆ.
ಈ ಮಧ್ಯೆ ಮೈಸೂರು ಜಿಲ್ಲೆಯ ಆಯ್ದ ಮೂರು ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆ ಅಣಕು ಕಾರ್ಯಾಚರಣೆ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಳಿಕೆರೆ, ಸಾರ್ವಜನಿಕ ಆಸ್ಪತ್ರೆ ಕೆ.,ಆರ್ ನಗರ ಮತ್ತು ಮೈಸೂರು ನಗರದ ಸಮುದಾಯ ಆರೋಗ್ಯ ಕೇಂದ್ರ , ಜಯನಗರ, ಆರೋಗ್ಯ ಕೇಂದ್ರಗಳನ್ನ ಕೋವಿಡ್ ಅಣುಕು ಕಾರ್ಯಾಚರಣೆಗೆ ಗುರುತಿಸಲಾಗಿದೆ. ಈ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನ ಒಳಗೊಂಡಂತೆ 25 ಜನರ ಲಸಿಕೆ ಪಡೆಯುವ ಫಲಾನುಭವಿಗಳನ್ನ ಗುರುತಿಸಲಾಗಿದೆ.
ಪ್ರತಿ ಲಸಿಕಾ ಕೇಂದ್ರಗಳಲ್ಲೂ ಮೂರು ಕೊಠಡಿಗಳನ್ನೊಳಗೊಂಡ 5 ಜನ ಲಸಿಕಾ ಅಧಿಕಾರಿಗಳನ್ನ ನೇಮಿಸಲಾಗಿದ್ದು, ಪ್ರತಿಯೊಬ್ಬರ ಕರ್ತವ್ಯವನ್ನ ನಿಗದಿಪಡಿಸಲಾಗಿದೆ. ಲಸಿಕೆ ಪಡೆದ ಫಲಾನುಭವಿಗಳು 30 ನಿಮಿಷ ನಿಗಾ ಕೊಠಡಿಯನ್ನ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಅಣಕು ಕಾರ್ಯಾಚರಣೆಯನ್ನ ಜನವರಿ 2 ರಂದು ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಜಿಲ್ಲೆಯ ಆಯ್ದ ಮೂರು ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಕೋವಿಡ್-19 ಲಸಿಕೆ ನೀಡಲಾಗುವುದಿಲ್ಲ. ಇದು ಕೇವಲ ಅಣುಕು (ಡ್ರೈ ರನ್) ಕಾರ್ಯಾಚರಣೆಯಾಗಿರುತ್ತದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಕೊಡದಂತೆ ಮೈಸೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Key words: covid-19 –dry run- operation -select 3- centers – Mysore district -tomorrow.