ಮೈಸೂರು,ಜನವರಿ,23,2021(www.justkananda.in) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಹೀಗಾಗಿಯೂ, ಭಾರತವು ಏಷ್ಯಾದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ದೇಶವಾಗಿದೆ ಎಂದು ಮೈಸೂರುವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್, ಇಂಡಿಯಾ(NASI) ಬೆಂಗಳೂರು ಚಾಪ್ಟರ್, ಮೈಸೂರು ವಿಶ್ವವಿದ್ಯಾಲಯ ಹಾಗೂ ನಾಸಿ ಪ್ರಧಾನ ಕಚೇರಿ ಪ್ರಯಾಗರಾಜ್ ಸಂಯುಕ್ತಾಶ್ರಯದಲ್ಲಿ ವಿಜ್ಞಾನಭವನದಲ್ಲಿ ಆಯೋಜಿಸಿದ್ದ “ಕೋವಿಡ್-19 ಸಾಂಕ್ರಾಮಿಕ ಜಾಗೃಕ್ತ ಅಭಿಯಾನ್ ವೆಬಿನಾರ್” ವರ್ಚುವಲ್ ಕಾರ್ಯಕ್ರಮಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಪ್ರಕರಣಗಳ ಹೆಚ್ಚಿನ ಸ್ಥಾನದಲ್ಲಿ ಅಮೆರಿಕವು 2ನೇ ಸ್ಥಾನದಲ್ಲಿದೆ. ಭಾರತವು ಅಭಿವೃದ್ಧಿಯ ವಿವಿಧ ಹಂತಗಳಲ್ಲಿ 30 ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳನ್ನು ಹೊಂದಿದೆ. ಇದರ ಜೊತೆಗೆ ರಾಷ್ಟ್ರೀಯ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಆರಂಭಿಸಿರುವುದು ಸಂತೋಷದ ವಿಚಾರ ಎಂದರು.
ಜನವರಿ 2,2021 ರಂದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಬಿಬಿವಿ125 (ಕೋವಾಕ್ಸಿನ್) ತುರ್ತು ಅಥವಾ ಷರತ್ತುಬದ್ಧ ಬಳಕೆಗಾಗಿ ಭಾರತದ ಔಷಧ ನಿಯಂತ್ರಕ ಜನರಲ್ನಿಂದ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಾಸಿ ಹೊಸ ಉಪಕ್ರಮಗಳ ಅಧ್ಯಕ್ಷೆ ಪ್ರೊ.ಮಂಜುಶರ್ಮಾ ಮಾತನಾಡಿ, ಕೊರೊನಾ ಕುರಿತಂತೆ ಎಲ್ಲರೂ ಅರಿತುಕೊಂಡಿದ್ದಾರೆ. ಲಸಿಕೆ ನೀಡುತ್ತಿದ್ದರೂ, ಎಚ್ಚರಿಕೆ ಬಹಳ ಮುಖ್ಯ. ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ಬಿಡಬಾರದು ಎಂದು ಸಲಹೆ ನೀಡಿದರು.
ನಾಸಿ ಅಧ್ಯಕ್ಷ ಪ್ರೊ.ಜಿ.ಪದ್ಮನಾಭನ್ ಮಾತನಾಡಿ, ಕೊರೊನಾ ತೊಡೆಯಲು ಲಸಿಕೆಯು ಸಹಕಾರಿಯಾಗಿದೆ. ಈ ಕುರಿತು ತಿಳಿದವರು ಜಾಗೃತಿ ಮೂಡಿಸುವ ಕಾರ್ಯಮಾಡಬೇಕು ಎಂದು ಹೇಳಿದರು.
ಸೋನೆಪತ್ ಅಶೋಕ ವಿಶ್ವವಿದ್ಯಾಲಯ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್ ಡಾ.ಶಾಹಿದ್ ಜಮೀಲ್ ಅವರು “ವೈರಸ್, ರೂಪಾಂತರಿ ವೈರಸ್ ರೂಪಗಳು ಮತ್ತು ಮಾಸ್ಕ್ ಗಳ” ಕುರಿತು ಹಾಗೂ ಬೆಂಗಳೂರು ಐಐಎಸ್ಸಿ ಆಣ್ಚಿಕ ಬಯೋಫಿಸಿಕ್ಸ್ ಘಟಕದ ಪ್ರೊ.ರಾಘವನ್ ವರದರಾಜನ್ ಕೋವಿಡ್-19 ಲಸಿಕೆಗಳ ಕುರಿತು ಮಾತನಾಡಿದರು.
ಲಕ್ನೋ ನಾಸಿ ಮಾಜಿ ಅಧ್ಯಕ್ಷ ಪ್ರೊ.ವಿ.ಪಿ.ಕಂಬೋಜ್ ಅವರು “ಮುಖವಾಡ ಧರಿಸುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಮತ್ತು ಸೋಪಿನಿಂದ ಕೈ ತೊಳೆಯುವ ಮೂಲಕ ಕೈ ನೈರ್ಮಲ್ಯವನ್ನು ಗಮನಿಸುವುದು”ಕುರಿತು ಮಾತನಾಡಿದರು.
ನಾಸಿ ಬೆಂಗಳೂರು ಚಾಪ್ಟರ್ ಕಾರ್ಯದರ್ಶಿ ಡಾ.ಪಿ.ಎನ್.ರಂಗರಾಜನ್, ಗುಲ್ಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಸೋನೆಪತ್ ಅಶೋಕ ವಿಶ್ವವಿದ್ಯಾಲಯ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್ ಡಾ.ಶಾಹಿದ್ ಜಮೀಲ್ ಇತರರು ಉಪಸ್ಥಿತರಿದ್ದರು.
key words : covid-19 epidemic-awakened-Abhiyan-Webinar-Chancellor-Prof.G.Hemant Kumar