‘ ಜನರ ದನಿ ದಮನಿಸದಿರಿ ‘ ಕೇಂದ್ರ ಸರಕಾರಕ್ಕೆ ‘ ಸುಪ್ರೀಂ ‘ ಖಡಕ್ ವಾರ್ನಿಂಗ್..

 

ನವದೆಹಲಿ,ಮೇ 01, 2021 : “ನೆರವಿಗೆ ಸಂಬಂಧಿಸಿ ಜನರು ಕೋರಿಕೆ ಮುಂದಿಟ್ಟಾಗ ಆ ದನಿಯನ್ನು ಸರ್ಕಾರವು ದಮನಿಸಬಾರದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.
ಅಂತರ್ಜಾಲ ದಲ್ಲಿ ನೆರವು ಕೇಳಿದಾಗ ಅದು ವದಂತಿ ಹರಡುವಿಕೆ ಎಂದು ಜನರನ್ನು ಸುಮ್ಮನಾಗಿಸಬಾರದು ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ರಾಜ್ಯಗಳ ಪೊಲೀಸ್‌ ಮುಖ್ಯಸ್ಥರಿಗೆ ಕೋರ್ಟ್‌ ಹೇಳಿದೆ.”,

‘ನಾವು ಇದನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅಂತಹ ಮಾಹಿತಿಯ ಹರಿವನ್ನು ತಡೆಯುವ ಕೆಲಸಮಾಡಬೇಡಿ. ಹಾಸಿಗೆ ಅಥವಾ ಆಮ್ಲಜನಕ ಕೊರತೆಯನ್ನು ಹೇಳಿಕೊಂಡವರಿಗೆ ಪೊಲೀಸರು ಕಿರುಕುಳ ನೀಡಿದರೆ ಅವರ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಪೀಠ ಎಚ್ಚರಿಸಿದೆ.

jk

‘ಈ ಮಾಹಿತಿಯು ಎಲ್ಲ ಪೊಲೀಸ್‌ ಸಿಬ್ಬಂದಿಗೂ ತಲುಪಲಿ. ಮಾಹಿತಿಯು ಮುಕ್ತವಾಗಿ ಹರಿಯಲಿ. ನಮ್ಮ ಪೌರರ ಧ್ವನಿಯನ್ನು ಆಲಿಸೋಣ. ಅವರ ಧ್ವನಿಯನ್ನು ಅದುಮಿಡುವ ಕೆಲಸ ಬೇಡ’ ಎಂದು ಪೀಠವು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾ‌ಣಗಳಲ್ಲಿ ನೆರವಿನ ಕೋರಿಕೆಯನ್ನು ತಡೆಯುವುದು ಸೇರಿದಂತೆ ಮಾಹಿತಿಯ ಮುಕ್ತ ಹರಿವಿಗೆ ಅಡ್ಡಿ ಪಡಿಸುವ ಯಾವುದೇ ಕ್ರಮವನ್ನು ನ್ಯಾಯಾಂಗನಿಂದನೆಯಾಗಿ ಪರಿಗಣಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ರವಾನಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹುಸಿ ಸಂದೇಶ ಹರಿಬಿಟ್ಟವರ ಮೇಲೆ ರಾಷ್ಟ್ರೀಯ ಭದ್ರತೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನವು ಮಹತ್ವ ಪಡೆದಿದೆ.
ಕೋವಿಡ್‌–19 ನಿರ್ವಹಣೆಗೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂಬ ವಿಚಾರವನ್ನು ಪೀಠವು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ. ವೈದ್ಯಕೀಯ ಆಮ್ಲಜನಕಕ್ಕೆ ಹೆಚ್ಚಿದ ಬೇಡಿಕೆ, ಅತಿ ಹೆಚ್ಚು ಬಾಧಿತ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆ, ಪೂರೈಕೆ ವ್ಯವಸ್ಥೆ ಮೇಲೆ ನಿಗಾದಂತಹ ವಿಷಯಗಳು ವಿಚಾರಣೆಗೆ ಒಳಪಟ್ಟಿವೆ. ಇಂತಹ ವಿಚಾರಗಳಲ್ಲಿ ಸರ್ಕಾರಕ್ಕೆ ಕಠಿಣವಾದ ಹಲವು ಪ್ರಶ್ನೆಗಳನ್ನು ಪೀಠವು ಕೇಳಿದೆ.

Central Government - withdrawn -petitions - injunction -Tractor Rally-stay-supreme court

ವೈದ್ಯರು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೂಡ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದ ಪರಿಸ್ಥಿತಿ ಇದೆ. 70 ವರ್ಷಗಳಿಂದ ಕಟ್ಟಿರುವ ಆರೋಗ್ಯ ರಕ್ಷಣಾ ವ್ಯವಸ್ಥೆ ಈಗ ಸಾಲದಾಗಿದೆ, ಪರಿಸ್ಥಿತಿ ಕರಾಳವಾಗಿದೆ ಎಂದೂ ಪೀಠವು ಅಭಿಪ್ರಾಯಪಟ್ಟಿದೆ.
ರಾಷ್ಟ್ರ ರಾಜಧಾನಿಯ ಕೋವಿಡ್‌ ಸ್ಥಿತಿಗೆ ಸಂಬಂಧಿಸಿ ದೆಹಲಿ ಸರ್ಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಕಚ್ಚಾಟ ಬಿಟ್ಟು ಕೇಂದ್ರದಜತೆಗೆ ಸಹಕರಿಸಿ ಎಂದು ಹೇಳಿದೆ. ‘ರಾಜಕೀಯವು ಚುನಾವಣೆಗೆ ಸೀಮಿತವಾಗಲಿ. ಈಗಿನದ್ದು ಮಾನವೀಯ ಬಿಕ್ಕಟ್ಟು. ಪ್ರತಿಯೊಬ್ಬರ ಜೀವದ ಬಗ್ಗೆಯೂ ಗಮನ ಹರಿಸಬೇಕಿದೆ. ನಮ್ಮ ಈ ಸಂದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಇರುವವರಿಗೆ ತಲುಪಿಸಿ, ಅವರು ರಾಜಕೀಯ ಬಿಟ್ಟು ಕೇಂದ್ರದ ಜತೆಗೆ ಮಾತಾಡಲಿ’ ಎಂದು ಪೀಠ ತಿಳಿಸಿತು.

ಕೃಪೆ : ಪ್ರಜಾವಾಣಿ

key words : covid-19-management-supreme-court-warning-to-central-bjp-government