ಬೆಂಗಳೂರು, ನವೆಂಬರ್ 29,2021(www.justkannada.in): ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು ಸುಮಾರು 12 ದೇಶಗಳಲ್ಲಿ ಕಂಡುಬಂದಿದೆ. ಕಳೆದ 12-13 ದಿನಗಳಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇರಿಸಿ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಹೊಸ ರೂಪಾಂತರಿ ಓಮಿಕ್ರಾನ್, ಹಿಂದೆ ನಾಲ್ಕು ದೇಶಗಳಲ್ಲಿ ಕಂಡುಬಂದಿತ್ತು. ಈಗ ಒಟ್ಟು 12 ದೇಶಗಳಲ್ಲಿ ಪತ್ತೆಯಾಗಿದೆ. ದೇಶದಲ್ಲೂ ಹೈ ಅಲರ್ಟ್ ಮೂಲಕ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ರಾಜ್ಯ ಸರ್ಕಾರ ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಮಂಗಳವಾರ ಆರೋಗ್ಯ ಇಲಾಖೆಯಿಂದ ವಿಶೇಷ ಸಭೆ ನಡೆಯಲಿದ್ದು, ಎಲ್ಲಾ ಹಿರಿಯ ಅಧಿಕಾರಿಗಳು, ವೈದ್ಯರು, ತಾಂತ್ರಿಕ ಸಲಹಾ ಸಮಿತಿ ತಜ್ಞರು ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಸರ್ಕಾರ ನೀಡುವ ಮಾರ್ಗಸೂಚಿ, ಅದರ ಪಾಲನೆ ಹೇಗಾಗಬೇಕು ಎಂಬುದರ ಬಗ್ಗೆ ಇಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.
ಹೊಸ ವೈರಾಣು ಡೆಲ್ಟಾ ರೂಪಾಂತರಿಯಷ್ಟು ಅಪಾಯಕಾರಿ ಅಲ್ಲ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಆದರೆ ವೈರಾಣು ವರ್ತನೆ ಬಗ್ಗೆ ಜಿನೊಮಿಕ್ ಸೀಕ್ವೆನ್ಸಿಂಗ್ ಆದ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ. ಡಿಸೆಂಬರ್ 1 ರ ನಂತರ ಓಮಿಕ್ರಾನ್ ಅಧ್ಯಯನದ ವಿವರಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.
ಯಾವುದೇ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಭಾಗದಲ್ಲಿ ಬಿಜೆಪಿಗೆ ಬಹಳ ಕಡಿಮೆ ಸಂಖ್ಯೆಯ ಶಾಸಕರಿರುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ನಿಭಾಯಿಸಿ, ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿಯ ಆಡಳಿತವನ್ನು ನೋಡಿ ಮೆಚ್ಚಿ ಪಕ್ಷಕ್ಕೆ ಅವಕಾಶ ನೀಡುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೋಲಾರದಲ್ಲಿ ಈ ಬಾರಿ ಅಚ್ಚರಿ ಎನಿಸುವ ಫಲಿತಾಂಶ ಬರಬಹುದು ಎಂದು ಸಚಿವ ಸುಧಾಕರ್ ತಿಳಿಸಿದರು.
Key words: covid- foreign travelers -came – state – last 12-13 days-Minister Dr. K. Sudhakar