ಬೆಂಗಳೂರು, ಫೆಬ್ರವರಿ,3, 2022 (www.justkannada.in): ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ನಲ್ಲಿ ನೀರನಲ್ಲಿ ಕೋವಿಡ್ ಸ್ವಯಂ ತಪಾಸಣಾ ಕಿಟ್ ಒಂದನ್ನು ಹಿಡಿದು ಅದರಲ್ಲಿ ಪಾಸಿಟಿವ್ ಫಲಿತಾಂಶ ಬರುವ ವೀಡಿಯೊ ಎಲ್ಲಾ ಕಡೆ ವೈರಲ್ ಆಗಿದೆ. ಈ ಸಂಬಂಧ ಮನೆಯಲ್ಲೇ ಪರೀಕ್ಷೆ ಮಾಡಿಕೊಳ್ಳುವ ಕಿಟ್ ಗಳ ನಿಖರತೆಯ ಕುರಿತು ವಾಸ್ತವಾಂಶವನ್ನು ತಿಳಿದುಕೊಳ್ಳುವ ಒಂದು ಪ್ರಯತ್ನ ಮಾಡಲಾಗಿದೆ.
ಕೆಲವು ಮನೆಗಳಲ್ಲಿ ಈ ರೀತಿ ದ್ರವಗಳ ಅಡಿ ಈ ಕಿಟ್ ಗಳನ್ನು ಹಿಡಿದಾಗ ಪಾಸಿಟಿವ್ ಫಲಿತಾಂಶಗಳು ಬಂದಿವೆ. ಆದರೆ ಈ ಪರೀಕ್ಷೆ/ತಪಾಸಣೆ ಸೂಚಿಸಿರುವ ಪ್ರಕಾರ ಬಳಸಿದರೆ ಬರುವ ಫಲಿತಾಂಶ ನಿಖರವಾಗಿರುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.
“ಈ ಸ್ವಯಂ ತಪಾಸಣಾ ಕಿಟ್ ಗಳ ಫಲಿತಾಂಶಗಳ ನಿಖರತೆಯ ಪ್ರಮಾಣ ಶೇ.೭೦ ರಿಂದ ೯೦ರಷ್ಟಿದೆ. ಆದರೆ ಈ ಕಿಟ್ಗಳನ್ನು ಬಳಸಲು, ನಿಖರವಾದ ಫಲಿತಾಂಶವನ್ನು ಪಡೆಯಲು ನಿಗದಿತ ಸೂಚನೆಗಳಿವೆ. ಒಂದು ವೇಳೆ ಈ ಸೂಚನೆಗಳನ್ನು ಸರಿಯಾಗಿ ಅನುಸರಿಸದೇ ಇದ್ದರೆ ನಿಮಗೆ ತಪ್ಪು ಫಲಿತಾಂಶ ಬರಬಹುದು,” ಎನ್ನುತ್ತಾರೆ ನಗರದ ಪ್ರಮುಖ ಆಸ್ಪತ್ರೆಯೊಂದರ ಕೋವಿಡ್ ಐಸಿಯು ವಿಭಾಗದ ಮುಖ್ಯಸ್ಥರಾದ ಡಾ. ಗೌರಿಶಂಕರ್ ರೆಡ್ಡಿ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ರೋಗಲಕ್ಷಣಗಳಿರುವಂತಹ ವ್ಯಕ್ತಿಗಳು ಮಾತ್ರ ಈ ಸ್ವಯಂತಪಾಸಣಾ ಕಿಟ್ ಗಳನ್ನು ಬಳಸುವಂತೆ ಸಲಹೆ ನೀಡಿದೆ. “ಈ ಪರೀಕ್ಷೆಯನ್ನು ಕೇವಲ ರೋಗಲಕ್ಷಣಗಳಿರುವಂತಹ ವ್ಯಕ್ತಿಗಳು ಹಾಗೂ ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿದ್ದವರು ಮತ್ತು ಪೂರ್ವ ಅನಾರೋಗ್ಯ ಇರುವಂತಹ ಹೆಚ್ಚು ಅಪಾಯದ ಸಂಭವವಿರುವಂತಹ ವ್ಯಕ್ತಿಗಳಿಗೆ ಮಾತ್ರ ಶಿಫಾರಸ್ಸು ಮಾಡಲಾಗಿದೆ. ಆದರೆ ಕೋವಿಡ್ ಮೂರನೇ ಅಲೆಯಲ್ಲಿ ಜನರು ಆತಂಕಗೊಂಡು ಅನಗತ್ಯವಾಗಿ ಈ ಸ್ವಯಂ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಆ್ಯಂಟಿಜೆನ್ ಸ್ವಯಂತಪಾಸಣಾ ಕಿಟ್ ಗಳನ್ನು ಸರಿಯಾಗಿ ಬಳಸದೇ ಇದ್ದರೆ ಪಿಹೆಚ್ ಬ್ಯಾಲೆನ್ಸ್ (pH balance) ಬಂದು ತಪ್ಪಾದ ಫಲಿತಾಂಶ ಬರುತ್ತದೆ ಎನ್ನುವುದು ಸೋಂಕು ರೋಗಗಳ ತಜ್ಞ ಡಾ. ರಘು ಅವರ ಅನಿಸಿಕೆಯಾಗಿದೆ.
“ಈ ಆ್ಯಂಟಿಜೆನ್ ತಪಾಸಣಾ ಕಇಟ್, ೯೯.೭% ಸಲೈನ್ ದ್ರಾವಣ ಇರುವ ಒಂದು ಬಫರ್ ದ್ರವದೊಂದಿಗೆ ಬರುತ್ತದೆ, ಹಾಗೂ ಇದೇ ನಿಶ್ಚೇತ ಪಿಹೆಚ್ ಅನ್ನು ಒದಗಿಸುತ್ತದೆ ಮತ್ತು ಪರೀಕ್ಷೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದನ್ನು ನೀವು ಇತರೆ ದ್ರವದೊಂದಿಗೆ ಬದಲಾವಣೆ ಮಾಡಿದರೆ ಮಟ್ಟ ಬದಲಾವಣೆಗೊಂಡು ತಪ್ಪಾದ ಫಲಿತಾಂಶ ನೀಡುತ್ತದೆ. ಈ ವೀಡಿಯೋಗಳಲ್ಲಿಯೂ ಇದೇ ಆಗುತ್ತಿರುವುದು,” ಎಂದು ಅವರು ವಿವರಿಸಿದ್ದಾರೆ. ಜನರು ಈ ಕಿಟ್ ಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ಈ ರೀತಿ ತಪ್ಪಾದ ಮಾಹಿತಿಯನ್ನು ಹರಡಬಾರದು ಎಂದು ವಿನಂತಿಸಿದ್ದಾರೆ.
“ಯಾವುದೇ ಒಂದು ಈ ರೀತಿಯ ವೀಡಿಯೊ ವೈರಲ್ ಆದರೆ, ಹೆಚ್ಚು ಹೆಚ್ಚು ಜನರು ಅದನ್ನೇ ಸತ್ಯ ಎಂದು ನಂಬಿಬಿಡುತ್ತಾರೆ. ಈ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗಳನ್ನು ಸಾಕಷ್ಟು ಸಂಶೋಧನೆ ನಡೆಸಿದ ನಂತರ ಉತ್ಪಾದಿಸಲಾಗಿವೆ ಮತ್ತು ಇವು ಬಹಳ ವಿಶ್ವಸನೀಯವಾಗಿವೆ,” ಎಂದು ಡಾ. ರಘು ಅಭಿಪ್ರಾಯಪಟ್ಟಿದ್ದಾರೆ.
ತಪ್ಪಾದ ನೆಗೆಟಿವ್ ಗಳು, ತಪ್ಪಾದ ಪಾಸಿಟಿವ್ ಗಳಿಗಿಂತ ಹೆಚ್ಚಾಗುವ ಅವಕಾಶಗಳಿವೆ. “ಆ್ಯಂಟಿಜೆನ್ ಟೆಸ್ಟ್ ನೊಂದಿಗೆ ಒಂದು ವೇಳೆ ಫಲಿತಾಂಶ ಪಾಸಿಟಿವ್ ಬಂದರೆ ಅದು ೧೦೦% ಪಾಸಿಟಿವ್. ಆದರೆ ನೆಗೆಟಿವ್ ಫಲಿತಾಂಶ ಬಂದರೆ ನೀವು ಅದನ್ನು ನಿಜವಾಗಿಯೂ ನೆಗೆಟಿವ್ ಎಂದು ಪರಿಗಣಿಸಲಾಗುವುದಿಲ್ಲ. ಕೆಲವೊಮ್ಮೆ ವೈರಾಣುಗಳ ಸಂಖ್ಯೆ ಬಹಳ ಕಡಿಮೆ ಇದ್ದರೆ ಪರೀಕ್ಷೆ ನಿಖರವಾದ ಫಲಿತಾಂಶವನ್ನು ತೋರಿಸದೇ ಇರಬಹುದು. ಒಂದು ವೇಳೆ ಈ ಪರೀಕ್ಷೆಯನ್ನು ವೃತ್ತಿಪರರು ಮಾಡದೇ ಇರುವ ಸಂದರ್ಭದಲ್ಲಿ ಅವರು ಮೂಗಿನ ಸ್ವಾಬ್ ಅನ್ನು ಸರಿಯಾಗಿ ಪಡೆಯದೇ ಇರಬಹುದು,” ಎಂದು ವಿವರಿಸಿದ್ದಾರೆ.
ಈ ತಪಾಸಣೆಗಳು ನಿಖರವಾಗಿ ಕಾರ್ಯನಿರ್ವಹಿಸಲು ವೈದ್ಯರೊಂದಿಗೆ ಆನ್ ಲೈನ್ ಸಮಾಲೋಚನೆಯನ್ನು ಮಾಡುವುದು ಉತ್ತಮ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.
ಪಿಸಿಆರ್ ಹಾಗೂ ಆರ್ಎಟಿ ಎಂದರೇನು?
ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ಪರೀಕ್ಷೆಗಳಿವೆ, ಒಂದು ಆ್ಯಂಟಿಜೆನ್ ಹಾಗೂ ಮಾಲಿಕ್ಯೂಲಾರ್ ಪರೀಕ್ಷೆ – ಇದು ದೇಹದಲ್ಲಿ ವೈರಾಣು ಇರುವುದನ್ನು ಗುರುತಿಸುತ್ತದೆ. ಪಿಸಿಆರ್ (polymerase chain reaction) ಎಂದು ಕರೆಯಲಾಗುವ ಮಾಲಿಕ್ಯೂಲಾರ್ ಪರೀಕ್ಷೆಯ ಫಲಿತಾಂಶ ಬರಲು ಸುಮಾರು ಐದು ಗಂಟೆಗಳು ಬೇಕಾಗುತ್ತದೆ. ಆದರೆ ರ್ಯಾಲಪಿಡ್ ಆ್ಯಂಟಿಜೆನ್ ಪರೀಕ್ಷೆ ಕೇವಲ ೧೫ ನಿಮಿಷಗಳ ಒಳಗೆ ಫಲಿತಾಂಶವನ್ನು ನೀಡುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ಮನೆಯಲ್ಲೇ ಪರೀಕ್ಷೆ ಮಾಡಿಕೊಳ್ಳುವ ಸ್ವಯಂತಪಾಸಣಾ ಕಿಟ್ ಗಳು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳಾಗಿವೆ.
ಮನೆಯಲ್ಲೇ ತಪಾಸಣೆ: ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿರುವುದು
ತಯಾರಕರು ನೀಡಿರುವ ಎಲ್ಲಾ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅನುಸರಿಸಿ.
ಪರೀಕ್ಷೆಯನ್ನು ಮಾಡುವ ಮುಂಚೆ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ, ಅಥವಾ ಸ್ಯಾನಿಟೈಜ್ ಮಾಡಿಕೊಳ್ಳಿ.
ಸ್ವಾಬ್ ಗೆ ಕೈ ಹಾಕಬೇಡಿ. ಮರುಪರೀಕ್ಷೆಯನ್ನು ಮಾಡದಿರಿ
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Covid – kits- inspection – trust