ದಹೋದ್, ನವೆಂಬರ್ ೨೦, ೨೦೨೧ (www.justkannada.in): ಈ ವರ್ಷ ಮೇ ೧ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದಂತಹ ೪೫ ವರ್ಷ ವಯಸ್ಸಿನ ಮಹಿಳೆಯೊಬ್ಬರು ಗುಜರಾತ್‌ನ ದಹೋದ್ ನಗರದ ಆಸ್ಪತ್ರೆಯಲ್ಲಿ ಬರೋಬ್ಬರಿ ೨೦೨ ದಿನಗಳನ್ನು ಕಳೆದ ನಂತರ ಮನೆಗೆ ಹಿಂದಿರುಗಿರುವ ಸುದ್ದಿ ಶನಿವಾರ ವರದಿಯಾಗಿದೆ.
ಗೀತಾ ಧಾರ್ಮಿಕ್ ಎಂಬ ಹೆಸರಿನ ಮಹಿಳೆ ಕೋವಿಡ್ ಪಾಸಿಟಿವ್ ಆಗಿದ್ದರು. ಈಕೆಯ ಪತಿ ದಹೋದ್‌ನಲ್ಲಿ ಓರ್ವ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ. ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ ಈಕೆ ಭೋಪಾಲ್‌ನಿಂದ ಹಿಂದಿರುಗಿದ ನಂತರ ಸೋಂಕೀಡಾಗಿದ್ದರು. ಹಾಗಾಗಿ ಅವರನ್ನು ದಹೋದ್‌ನ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಬರೋಬ್ಬರಿ ೨೦೨ ದಿನಗಳ ನಂತರ ಈಕೆ ಚೇತರಿಸಿಕೊಂಡಿದ್ದು ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಗೀತಾ ಅವರ ಪತಿ ರೈಲ್ವೆ ಇಲಾಖೆಯ ನೌಕರರಾದ ತ್ರಿಲೋಕ್ ಧಾರ್ಮಿಕ್ ಅವರು ತಿಳಿಸಿರುವಂತೆ, “ಶುಕ್ರವಾರದಂದು ದಹೋದ್‌ನ ರೈಲ್ವೆ ಆಸ್ಪತ್ರೆಯಿಂದ ಆಕೆ ಡಿಸ್ಚಾರ್ಜ್ ಆಗಿದ್ದು, ನಮ್ಮ ಕುಟುಂಬಸ್ಥರೆಲ್ಲರಿಗೂ ಬಹಳ ಸಂತೋಷವಾಗಿದೆ. ಆಕೆ ದಹೋದ್ ಹಾಗೂ ವಡೋದರಾದಲ್ಲಿ ಒಟ್ಟು ೨೦೨ ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು. ಆಸ್ಪತ್ರೆಯಲ್ಲಿದ್ದಾಗ ಆಕೆ ವೆಂಟಿಲೇಟರ್ ಹಾಗೂ ಆಮ್ಲಜನಕದ ಬೆಂಬಲದಲ್ಲಿದ್ದಳು.”
ತ್ರಿಲೋಕ್ ಧಾರ್ಮಿಕ್ ಹೇಳುವಂತೆ ಈ ೨೦೨ ದಿನಗಳಲ್ಲಿ ಒಂಬತ್ತು ಬಾರಿ ಆಕೆ ಇನ್ನು ಚೇತರಿಸಿಕೊಳ್ಳುವುದೇ ಇಲ್ಲ ಎಂದು ಭಾವಿಸಿದ್ದರಂತೆ. ಆದರೆ ಪ್ರತಿ ಬಾರಿ ಆಕೆ ಚೇತರಿಸಿಕೊಂಡು ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
“ನಾವು ನಮ್ಮ ಮಾವ ಹೃದಯಾಘಾತದಿಂದ ತೀರಿಕೊಂಡ ಕಾರಣದಿಂದಾಗಿ ಏಪ್ರಿಲ್ ೨೩ರಂದು ಭೋಪಾಲ್‌ಗೆ ತೆರಳಿದ್ದೆವು. ಏಪ್ರಿಲ್ ೨೫ರಂದು ದಹೋದ್‌ಗೆ ಮರಳಿದೆವು. ಆಗ ನನ್ನ ಮಡದಿಗೆ ಕೊರೊನ ಸೂಚನೆಗಳು ಕಂಡು ಬಂತು. ಮೇ ೧ರಂದು ಆಕೆ ಕೋವಿಡ್ ಪಾಸಿಟಿವ್ ಎಂದು ತಿಳಿದು ಬಂತು. ಆಕೆಯ ದೇಹದ ಆಮ್ಲಜನಕ ಮಟ್ಟ ಕಡಿಮೆಯಾಗತೊಡಗಿ ಜ್ವರ ಹೆಚ್ಚಾಯಿತು. ಹಾಗಾಗಿ ಆಕೆಯನ್ನು ಮೇ ೧ರಂದು ದಹೋದ್‌ನ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಯಿತು. ಮೇ ೬ರಂದು ಆಕೆಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆಕೆಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿತ್ತು. ಹಾಗಾಗಿ ಆಕೆಯನ್ನು ಮೇ ೭ ರಿಂದ ಮೇ ೨೩ರವರೆಗೆ ವಡೋದರಾದ ಖಾಸಗಿ ಆಸ್ಪತ್ರೆಯೊಂದಕ್ಕೆ ವರ್ಗಾಯಿಸಲಾಯಿತು,” ಎಂದು ಆಕೆಯ ಪತಿ ವಿವರಿಸಿದರು.
ದಹೋದ್‌ನಲ್ಲಿ ವೈದ್ಯರನ್ನು ಸಂಪರ್ಕಿಸಿದ ನಂತರ ಆಕೆಯ ಪತಿ ಆಕೆಯನ್ನು ದಹೋದ್‌ನ ಆಸ್ಪತ್ರೆಗೆ ಪುನಃ ವರ್ಗಾಯಿಸಲು ನಿರ್ಧರಿಸಿ, ಮೇ ೨೪ ರಂದು ಕರೆತಂದರು. ದಹೋದ್‌ನ ಆಸ್ಪತ್ರೆಯಲ್ಲಿ ಆಕೆ ಸುಮಾರು ಎರಡು ತಿಂಗಳ ಕಾಲ ವೆಂಟಿಲೇಟರ್ ಸಹಾಯದಲ್ಲಿದ್ದರು.
“ನಾವು ಆಕೆ ಚೇತರಿಸಿಕೊಳ್ಳುತ್ತಾಳೆ ಎಂಬ ನಂಬಿಕೆಯನ್ನು ಬಿಟ್ಟುಬಿಟ್ಟಿದೆವು. ಈ ಅವಧಿಯಲ್ಲಿ ಕನಿಷ್ಠ ಒಂಬತ್ತು ಬಾರಿ ನಮಗೆ ಆಕೆ ಇನ್ನು ಬದುಕುಳಿಯುವುದಿಲ್ಲ ಎಂದನಿಸಿತ್ತು. ಒಂದು ಹಂತದಲ್ಲಂತೂ ವೈದ್ಯರು ಆಕೆಗೆ ಶ್ವಾಸಕೋಶವನ್ನೇ ಬದಲಾಯಿಸಬೇಕು ಎಂದಿದ್ದರು,” ಎನ್ನುತ್ತಾರೆ ಆಕೆಯ ಪತಿ.
“ಆದರೂ ಸಹ ಆಕೆ ಕೇವಲ ಔಷಧಿ ಹಾಗೂ ಆಮ್ಲಜಕನಕ ಚಿಕಿತ್ಸೆಯಲ್ಲಿಯೇ ಚೇತರಿಸಿಕೊಳ್ಳಲು ಆರಂಭಿಸಿದಳು. ಕ್ರಮೇಣ ಆಕೆಯ ಆರೋಗ್ಯ ಸುಧಾರಿಸತೊಡಗಿತು. ನಂತರ ವೈದ್ಯರು ಆಕೆಯನ್ನು ಡಿಸ್ಚಾರ್ಜ್ ಮಾಡಲು ನಿರ್ಧರಿಸಿದರು,” ಎಂದು ಧಾರ್ಮಿಕ್ ವಿವರಿಸಿದ್ದಾರೆ.
“ಈಗಲೂ ಸಹ ಆಕೆಗೆ ಸ್ವಲ್ಪ ಆಮ್ಲಜನಕದ ಅವಶ್ಯತೆ ಇದೆ, ಆದರೆ ಆಕೆಯ ದೇಹದ ಇತರೆ ಪರಿಸ್ಥಿತಿ ಸರಿಯಾಗಿದೆ. ಆಕೆಯ ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆಯಾಗಿ ಆಕೆಯನ್ನು ೨೦೨ ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿದೆ,” ಎಂದು ನಿಟ್ಟುಸಿರು ಬಿಡುತ್ತಾರೆ ತ್ರಿಲೋಕ್ ಧಾರ್ಮಿಕ್.
ವಿಧಿಯಾಟ ಬಲ್ಲರ್ಯಾ ರು, ಅಲ್ಲವೇ?
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
key words : covid-positive-patient-discharge-after-202-days-in-Gujarat