ರಾಮನಗರ,ಜನವರಿ,2,2021(www.justkannada.in): ನಿನ್ನೆಯಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿದ್ದು ಈ ಮಧ್ಯೆ ಶಾಲೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ದೂರು ಕೇಳಿ ಬರುತ್ತಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ವಿಚಕ್ಷಣ ದಳ ರಚನೆ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪ್ರತಿ ಜಿಲ್ಲೆಗಳಲ್ಲೂ ಮೂರರಿಂದ ನಾಲ್ಕು ತಂಡ ವಿಚಕ್ಷಣ ದಳ ರಚನೆ ಮಾಡುತ್ತೇವೆ. ವಿಚಕ್ಷಣ ದಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಶಾಲೆಗಳ ಸ್ಥಿತಿ ಬಗ್ಗೆ ವರದಿ ನೀಡುತ್ತಾರೆ ಎಂದರು.
ಇನ್ನು ಶೈಕ್ಷಣಿಕ ವರ್ಷದ ಪರೀಕ್ಷೆ ಬಗ್ಗೆ ಆತಂಕ ಬೇಡ. ಮೂರ್ನಾಲ್ಕು ದಿನಗಳಲ್ಲಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಹಾಗಯೇ ಬಸ್ ಸೌಲಭ್ಯದ ಬಗ್ಗೆ ಚರ್ಚೆ ಮಾಡುತ್ತೇನೆ. ಹಳೆ ಬಸ್ ಪಾಸ್ ಅನ್ನೇ ತೋರಿಸಿ ಪ್ರಯಾಣ ಬೆಳೆಸಬಹುದು. ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ತೊಂದರೆ ಕೊಡಬಾರದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ಗೊತ್ತಿದೆ. ಖಾಸಗಿ ಶಾಲೆಗಳು ಪೋಷಕರ ಜತೆ ಸಭೆ ನಡೆಸಿ. ಪೋಷಕರ ಸ್ಥಿತಿ ಅವಲೋಕಿಸಿ ಶುಲ್ಕ ನಿಗದಿ ಮಾಡಿ. ಇಲ್ಲದಿದ್ದರೇ ಇಲಾಖೆ ವತಿಯಿಂದ ಶುಲ್ಕ ನಿಗದಿ ಮಾಡಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
Key words: Covid –rule- Violation- Complaints – Schools-Minister -Suresh Kumar