ಮೈಸೂರು,ಮೇ,24,2021(www.justkannada.in): ನಾನು ನಿತ್ಯವೂ ಕೂಡ ಕರೋನಾ ತಪಾಸಣೆ ಮಾಡಿಸುತ್ತೇನೆ. ಆಂಟಿಜನ್ ಟೆಸ್ಟ್ ಮಾಡಿಸಿದ ಬಳಿಕವೇ ನಾನು ಕೆಲಸಕ್ಕೆ ಬರೋದು. ನಮ್ಮಿಂದ ಯಾರಿಗೂ ಸಮಸ್ಯೆ ಆಗಬಾರದು. ಹಾಗಾಗಿ ದಿನದ ತಪಾಸಣೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಕೆಲಸಕ್ಕೆ ಬರುತ್ತೇನೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ತಮ್ಮ ಕುಟುಂಬದ ಸದಸ್ಯರಿಗೆ ಕರೋನಾ ಪಾಸಿಟಿವ್ ಬಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಮೂವರು ಮನೆಯಲ್ಲಿದ್ದಾರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರು ಇದೀಗ ಸುಧಾರಣೆ ಕಂಡಿದ್ದಾರೆ. ನಾನು ಚೆಕ್ ಮಾಡಿಸಿದಾಗ ನೆಗೆಟಿವ್ ಬಂದಿದೆ ಎಂದರು.
ಕೆ.ಆರ್.ಆಸ್ಪತ್ರೆಗೆ ಇದು ಮೊದಲ ಭೇಟಿಯಲ್ಲ, ಈಗಾಗಲೇ ಮೂರು ಬಾರಿ ಪಿಪಿಇ ಕಿಟ್ ಧರಿಸಿ ಕೋವಿಡ್ ಪಾಸಿಟಿವ್ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸದ್ಯ ಬ್ಲಾಕ್ ಫಂಗಸ್ ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ. ತಾಲೂಕು ಮಟ್ಟದಲ್ಲಿ ಸದ್ಯ ತಾಲ್ಲೂಕು ಆಡಳಿತ ಕೆಲಸ ಮಾಡ್ತಿದೆ.
ಬ್ಲಾಕ್ ಫಂಗಸ್ ನ ಸಮಸ್ಯೆ ಹೆಚ್ಚಾಗಿರುವ ಕಾರಣ. ನಾನು ಕೆ.ಆರ್ ಆಸ್ಪತ್ರೆ ಭೇಟಿ ಕೊಟ್ಟು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಕ್ಕೆ ಬೇಕಾದ ಸೂಕ್ತ ಔಷಧಿ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇನೆ. ಜೆಎಸ್ಎಸ್ ಆಸ್ಪತ್ರೆಯಿಂದಲು ಔಷಧಿಯ ಬೇಡಿಕೆ ಬಂದಿದೆ. ಹಾಗಾಗಿ ಸರ್ಕಾರಕ್ಕೆ ಈಗಲೇ ಪತ್ರ ಬರೆದು ಔಷಧಿಗಾಗಿ ಮನವಿ ಮಾಡುತ್ತೇವೆ. ಸದ್ಯ ಇರುವುದರಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಅವರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.
Key words: Covid test -all day-negative-report-work- Mysore DC -Rohini Sindhuri.