ಕೋವಿಡ್ ಲಸಿಕೆ ಪ್ರಕ್ರಿಯೆ, ಟೆಸ್ಟ್‌ಗೆ ಅಡ್ಡಿ ಇಲ್ಲ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು, ಏಪ್ರಿಲ್ 23: ಏಪ್ರಿಲ್ 24 ಶನಿವಾರ ಮತ್ತು 25 ಭಾನುವಾರ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಎಲ್ಲಾ ಕೇಂದ್ರಗಳಲ್ಲೂ ಮುಂದುವರಿಯುತ್ತದೆ. ಕೋವಿಡ್ ಪರೀಕ್ಷೆಗೆ ಮಾದರಿಯನ್ನು ಸಹ ಸಂಗ್ರಹಿಸಲಾಗುವುದು. ಈ ಪ್ರಕ್ರಿಯೆಗೆ ಯಾವುದೇ ಅಡೆತಡೆ ಇಲ್ಲ ಎಂದು ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಹೇಳಿದರು.

ಈ ಸಂಬಂಧ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಿದರು‌.

ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಶನಿವಾರ ಮತ್ತು ಭಾನುವಾರವೂ ನಿರ್ಬಂಧ ಇರುವುದಿಲ್ಲ. ಮೈಸೂರು ನಗರ ವ್ಯಾಪ್ತಿಯಲ್ಲಿ ಕೇವಲ 44% ಲಸಿಕೆ ಹಾಕಿದೆ. ಲಸಿಕೆ ಪ್ರಮಾಣ ಹೆಚ್ಚಿಸಲು ಎಲ್ಲಾ ಲಸಿಕಾ ಕೇಂದ್ರದಲ್ಲಿ ಪ್ರತಿದಿನ 300 ಲಸಿಕೆ ನೀಡುವ ಗುರಿ ಹಾಕಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೋಗಿಗಳು ಮತ್ತು ಅಗತ್ಯವಿದ್ದರೆ ಅವರಿಗೆ ಸಹಾಯಕರಾಗಿ ಬರುವವರಿಗೆ, ಲಸಿಕೆ ಪಡೆಯುವ ಉದ್ದೇಶದಿಂದ ಆಸ್ಪತ್ರೆಗೆಗಳಿಗೆ ಬರುವವರಿಗೆ ಕರ್ಫ್ಯೂ‌ ಸಂದರ್ಭದಲ್ಲೂ ಆಸ್ಪತ್ರೆಗೆ, ಲಸಿಕಾ ಕೇಂದ್ರಕ್ಕೆ ಹೋಗಿ ಬರಲು ಮಾರ್ಗಸೂಚಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಅಪರ ಜಿಲ್ಲಾಧಿಕಾರಿ ಡಾ. ಮಂಜುನಾಥಸ್ವಾಮಿ, ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಸಿ.ಪಿ.ನಂಜರಾಜ್, ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.