ಮೈಸೂರು, ಫೆ 18, 2020 : (www.justkannada.in news ) ಚಾಮುಂಡಿಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ತಂಡವೊಂದು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿತು.
ಪುರಾತತ್ವ ಇಲಾಖೆ ಹಿರಿಯ ಅಧಿಕಾರಿ ಆರ್. ಗೋಪಾಲ್ ನೇತೃತ್ವದ ಈ ತಂಡದಲ್ಲಿ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಭಾಗಿಯಾಗಿದ್ದರು.
ನಂದಿ ವಿಗ್ರಹ ಸುಮಾರು 400 ವರ್ಷಗಳ ಹಳೆಯ ವಿಗ್ರಹವಾಗಿದ್ದು 1659-73 ರಲ್ಲಿ ನಿರ್ಮಾಣ ಗೊಂಡಿತ್ತು. ಚಾಮುಂಡಿ ಬೆಟ್ಟದ ಮೇನ್ ಅಟ್ರ್ಯಾಕ್ಷನ್ ಆಗಿರುವ ಈ ನಂದಿ ವಿಗ್ರಹ ವರ್ಷಕ್ಕೆ ಎರಡು ಬಾರಿ ಮಹಾ ಮಜ್ಜನ ನಡೆಯೋ ಪುಣ್ಯ ಸ್ಥಳವಾಗಿದೆ. ಇಂಥ ನಂದಿ ವಿಗ್ರಹದ ಕಾಲು, ಕತ್ತು ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ.
ಕಪ್ಪಾಗಿದ್ದ ನಂದಿ ವಿಗ್ರಹವನ್ನ ಪಾಲಿಶ್ ಮಾಡಿಸಿ ಇತ್ತೀಚೆಗೆ ಹೊಸ ರೂಪ ಕೊಡಲಾಗಿತ್ತು. ಈ ಮೂಲಕ ಕಪ್ಪಾಗಿದ್ದ ವಿಗ್ರಹ ಬಿಳಿಯಾಗಿ ಪರಿವರ್ತನೆ ಮಾಡಲಾಗಿತ್ತು. ಈ ವೇಳೆ ವೈಜ್ಞಾನಿಕವಾಗಿ ಸಂರಕ್ಷಣೆ ಮಾಡದ ಹಿನ್ನೆಲೆಯಲ್ಲಿ ಬಿರುಕು ಮೂಡಿದೆ ಎನ್ನಲಾಗಿತ್ತು.
ಈ ಸಂಬಂಧ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಪಾರಂಪರಿಕ ತಜ್ಞರ ಸಮಿತಿಯೊಂದನ್ನ ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಲಾಗಿತ್ತು. ಅದರಂತೆ ಇಂದು ಅಧಿಕಾರಿಗಳ ತಂಡ ವಿಗ್ರಹ ಪರಿಶೀಲನೆ ನಡೆಸಿತು.
ನಂದಿ ಹಿನ್ನೆಲೆ :
1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಇವರ ಅವಧಿಯಲ್ಲಿ 1000 ಮೆಟ್ಟಿಲುಗಳನ್ನು ಮತ್ತು ಈಶ್ವರನಿಗೆ ಬಹುಪ್ರಿಯವಾದ ನಂದಿಯ ಬಹುದೊಡ್ಡ ನಂದಿ ವಿಗ್ರಹವನ್ನು ನಿರ್ಮಿಸಲಾಯಿತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿರುತ್ತದೆ. ಈ ನಂದಿ ವಿಗ್ರಹಕ್ಕೆ ಬಹು ದೊಡ್ಡ ಮತ್ತು ಆಕರ್ಷಣೆಯಿಂದ ಕೂಡಿದ ಘಂಟೆಗಳನ್ನು ಇದರ ಕುತ್ತಿಗೆ ಭಾಗದಲ್ಲಿ ನಿರ್ಮಿಸಲಾಗಿದೆ.
ನಂದಿ ಮತ್ತು ದೇವಸ್ಥಾನವು ಪಕ್ಕದಲ್ಲಿಯೇ ಇದ್ದು ಚಾಮುಂಡಿ ಬೆಟ್ಟಕ್ಕೆ ಹತ್ತುವ 700 ನೇ ಮೆಟ್ಟಿಲಿನ ಬಳಿಯೇ ನಿರ್ಮಿಸಲಾಗಿದೆ.
Key words: Cracks in the famous monolithic Nandi statue in the Chamundi Hills of Mysore
Crack inspection of the famous monolithic Nandi statue of Chamundi hill in Mysore by a team of experts.