ಮೈಸೂರು,ಜನವರಿ,26,2021(www.justkannada.in): 2021ರ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮೈಸೂರು ಹೊರ ವರ್ತುಲ ರಸ್ತೆಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲು ತಂಡವನ್ನು ರಚಿಸುವಂತೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸೂಚಿಸಿದರು.
ಮೈಸೂರು ರಿಂಗ್ ರಸ್ತೆಯ ತ್ಯಾಜ್ಯ ಹಾಗೂ ಡಬ್ರೀಸ್ ಗೆ ಸಂಬಂಧಿಸಿದಂತೆ ಗವರ್ನಮೆಂಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸ್ವಚ್ಛತೆ ಬಗ್ಗೆ ನಾವೆಲ್ಲರೂ ಗಮನಹರಿಸಲೇಬೇಕು. ಲೋಕೋಪಯೋಗಿ, ಆರ್ ಡಿ ಪಿಆರ್, ರಾಜ್ಯ ಹೆದ್ದಾರಿ ಇಲಾಖೆ, ಕೆಆರ್ ಐಡಿಎಲ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಮಹಾನಗರ ಪಾಲಿಕೆಗಳ ಕಾರ್ಯಪಾಲಕ, ಅಧೀಕ್ಷಕ ಅಭಿಯಂತರರು ಹಾಗೂ ಯೋಜನಾ ನಿರ್ದೇಶಕರನ್ನೊಳಗೊಂಡ ತಂಡ ರಚನೆ ಮಾಡಲು ಸೂಚನೆ ನೀಡಿದರು.
ಯಾವ ಯಾವ ಸ್ಥಳ ನಿಗದಿ?
- ಮೈಸೂರು ನಗರದ ಹೊರ ವರ್ತುಲದ ರಸ್ತೆಯ ಕೊಲಂಬಿಯಾ ಏಷ್ಯಾ ವೃತ್ತದಿಂದ ಹಿನಕಲ್ ಸೇರುವ ರಸ್ತೆವರೆಗೆ ಇರುವ 9 ಕಿ.ಮೀ. ಉದ್ದದ ಸ್ವಚ್ಛತಾ ನಿರ್ವಹಣೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿ.
- ಮೈಸೂರು ನಗರದ ಹೊರವರ್ತುಲ ರಸ್ತೆಯ ಹಿನಕಲ್ ವೃತ್ತದಿಂದ ದಟ್ಟಗಳ್ಳಿ ಆದಿತ್ಯ ವೃತ್ತದವರೆಗಿನ 7.30 ಕಿ.ಮೀ. ಉದ್ದದವರೆಗಿನ ಸ್ವಚ್ಛತಾ ನಿರ್ವಹಣೆಯು ಆರ್ ಡಿಪಿಆರ್ ಇಲಾಖೆ ಯ ಜವಾಬ್ದಾರಿ.
- ಮೈಸೂರು ನಗರದ ಹೊರವರ್ತುಲ ರಸ್ತೆಯ ದಟ್ಟಗಳ್ಳಿ ಆದಿತ್ಯ ವೃತ್ತದಿಂದ ಬಂಡಿಪಾಳ್ಯದ ವರೆಗಿನ 8.39 ಕಿ.ಮೀ.ವರೆಗೆ ಹಾಗೂ ಹೆಚ್ಚುವರಿಯಾಗಿ ಹೊರವರ್ತುಲ ರಸ್ತೆಯ ಪೂರ್ಣ ಪ್ರಮಾಣದಲ್ಲಿ ಫ್ಲೆಕ್ಸ್ ಮತ್ತು ಹೋರ್ಡಿಂಗ್ ಗಳನ್ನು ತೆರವುಗೊಳಿಸಲು ಕ್ರಮ ವಹಿಸುವ ಜವಾಬ್ದಾರಿಯನ್ನು ರಾಜ್ಯ ಹೆದ್ದಾರಿ ಇಲಾಖೆಗೆ ವಹಿಸುವುದು
- ಮೈಸೂರು ನಗರದ ಹೊರವರ್ತುಲ ರಸ್ತೆಯ ಬಂಡಿಪಾಳ್ಯದ ವೃತ್ತದಿಂದ ಟಿ. ನರಸೀಪುರ ಬನ್ನೂರು ಮಾರ್ಗ ಸೇರುವ ರಸ್ತೆವರೆಗಿನ 9.33 ಕಿ.ಮೀ. ವರೆಗಿನ ಸ್ವಚ್ಛತಾ ನಿರ್ವಹಣೆ ಜವಾಬ್ದಾರಿಯು ಕ್ರಮವಾಗಿ ನಿರ್ಮಿತಿ ಕೇಂದ್ರ ಮೈಸೂರು ವಿಭಾಗ ಹಾಗೂ ಕೆ ಆರ್ ಐ ಡಿ ಎಲ್ ಗೆ ವಹಿಸುವುದು
- ಮೈಸೂರು ನಗರದ ಹೊರವರ್ತುಲ ರಸ್ತೆಯ ಟಿ. ನರಸೀಪುರ ಬನ್ನೂರ್ ರಸ್ತೆ ಸೇರುವ ವೃತ್ತದಿಂದ ಕೊಲಂಬಿಯಾ ವೃತ್ತದವರೆಗಿನ 7.50 ಕಿ.ಮೀ. ಉದ್ದದ ವ್ಯಾಪ್ತಿಯ ಸ್ವಚ್ಚತಾ ನಿರ್ವಹಣೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸುವುದು
- ಮೈಸೂರು ನಗರದ ಹೊರವರ್ತುಲ ರಸ್ತೆಯ ಒಳಭಾಗ ಹಾಗೂ ಮೈಸೂರು ನಗರವನ್ನು ಪ್ರವೇಶಿಸುವ ಮುಖ್ಯ ರಸ್ತೆಗಳ ಸ್ವಚ್ಚತಾ ನಿರ್ವಹಣೆಯನ್ನು ಮೈಸೂರು ಮಹಾನಗರಪಾಲಿಕೆ ವಹಿಸುವುದು.
ಹೀಗೆ ಒಂದೊಂದು ಇಲಾಖೆಗೆ ಒಂದೊಂದು ವ್ಯಾಪ್ತಿಯ ಜವಾಬ್ದಾರಿ ವಹಿಸುವ ಬಗ್ಗೆ ಚರ್ಚೆಗಳು ನಡೆದವು. ಅಂತಿಮವಾಗಿ ಇನ್ನೊಂದು ಸುತ್ತಿನ ಮಾತುಕತೆ ಬಳಿಕ ಹೆಚ್ಚುವರಿ ಜವಾಬ್ದಾರಿಗಳಿದ್ದರೆ, ಇಲ್ಲವೇ ಈಗ ಮಾಡಿರುವ ಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಮಾಧ್ಯಮಗಳ ಮೂಲಕ ಎಚ್ಚರಿಕೆ ಸಂದೇಶ ನೀಡಿ…
ತ್ಯಾಜ್ಯ ಹಾಗೂ ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಕೇವಲ ಮೈಸೂರಿನ ರಿಂಗ್ ರಸ್ತೆ ಮಾತ್ರವಲ್ಲದೆ, ನಗರದೊಳಗೂ ಸಹ ಕಸ ಹಾಕಿದರೆ ದಂಡ ಹಾಗೂ ಜೈಲು ಶಿಕ್ಷೆ ಇದೆ ಎಂಬ ಅಂಶವನ್ನು ಮಾಧ್ಯಮಗಳಲ್ಲಿ ಪ್ರಕಟಣೆಗಳ ಮುಖಾಂತರ ಸಾರ್ವಜನಿಕವಾಗಿ ಎಚ್ಚರಿಕೆ ಸಂದೇಶವನ್ನು ನೀಡಬೇಕು ಎಂದು ಸಚಿವರಾದ ಸೋಮಶೇಖರ್ ಸೂಚಿಸಿದರು.
ಜನಸಂಪರ್ಕ ಸಭೆ ನಡೆಸಿ ಅಧಿಕಾರಿಗಳನ್ನು ಕರೆಸಿ ಎಲ್ಲ ರೀತಿಯಲ್ಲಿಯೂ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಎಲ್ಲೆಂದರಲ್ಲಿ ಮಾಂಸ, ಕೋಳಿ ತ್ಯಾಜ್ಯಗಳ ಸುರಿಯುವವರನ್ನು ಗುರುತಿಸಿ ಅವರ ಚಲನವಲನಗಳ ಮೇಲೆನಿಗಾ ಇಡಬೇಕು. ಅವರು ಸೂಕ್ತ ಪ್ರದೇಶದಲ್ಲಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದರೆ ಎಚ್ಚರಿಕೆ ನೀಡಬೇಕು. ಜೊತೆಗೆ ಮರುಕಳಿಸಿದರೆ ಶಿಕ್ಷೆ ಬಗ್ಗೆಯೂ ಗಮನ ಸೆಳೆಯಬೇಕು. ಈ ನಿಟ್ಟಿನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
ಅಲ್ಲದೆ, ಸ್ವಚ್ಛತೆಯನ್ನು ಕಾರ್ಯನಿರ್ವಹಿಸುವ ತಂಡಗಳಿಗೆ ಹೊರವರ್ತುಲ ರಸ್ತೆಯ ಮೀಡಿಯನ್ ಅನ್ನು ಸ್ವಚ್ಛಗೊಳಿಸುವುದು, ಹೊರವರ್ತುಲ ರಸ್ತೆ, ಸರ್ವಿಸ್ ರಸ್ತೆ ಹಾಗೂ ಪಾದಚಾರಿ ಮಾರ್ಗದಲ್ಲಿ ಶೇಖರಣೆಯಾಗಿರುವ ಡೆಬ್ರೀಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ನೀಡಲಾಯಿತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ತನ್ವೀರ್ ಸೇಠ್, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮುಡಾ ಆಯುಕ್ತರಾದ ನಟೇಶ್, ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
Key words: Create – team – clean -outer ring roads – Mysore-MINISTER -ST SOMASHEKHAR.