ಮೈಸೂರು,ನವೆಂಬರ್,11,2023(www.justkannada.in): ನಕಲಿ ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಸೃಷ್ಟಿಸಿ ಬೇನಾಮಿ ವ್ಯಕ್ತಿಗಳಿಗೆ ಪೌತಿ ಮಾಡಿಕೊಟ್ಟ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನ ಅಮಾನತು ಮಾಡಿ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಟಿ.ನರಸೀಪುರ ತಾಲೂಕು ಕಚೇರಿ ಹಿಂದಿನ ರಾಜಸ್ವ ನಿರೀಕ್ಷಕ(ಹಾಲಿ ಆಹಾರ ನಿರೀಕ್ಷಕ ಟಿ.ನರಸೀಪುರ)ರಾದ ದೇವಣ್ಣ.ಕೆ, ಟಿ.ನರಸೀಪುರ ಭೈರಾಪುರ ಹಿಂದಿನ ಗ್ರಾಮ ಆಡಳಿತ ಅಧಿಕಾರಿ(ಹಾಲಿ ಜಯಪುರ ವೃತ್ತ ಗ್ರಾಮ ಆಡಳಿತಾಧಿಕಾರಿ)ಪ್ರದೀಪ್ ಸಿಂಗ್ ಹಾಗೂ ಟಿ.ನರಸೀಪುರ ತಾಲೂಕು ಕಚೇರಿ ಗ್ರಾಮ ಆಡಳಿತ ಅಧಿಕಾರಿ, ಭೂಮಿಕೇಂದ್ರದ ಹಂಸಲೇಖ ಅಮಾನತಾದ ಅಧಿಕಾರಿಗಳು.
ಪ್ರಕರಣ ಸಂಬಂಧ ಐವರು ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಹಿಂದಿನ ಟಿ.ನರಸೀಪುರ ತಹಸೀಲ್ದಾರ್ ಗೀತಾ ಹಾಗೂ ಉಪವಿಭಾಗಾಧಿಕಾರಿಗಳಾದ ಕೆ.ಆರ್.ರಕ್ಷಿತ್ ರವರು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ನೀಡಿದ್ದರು. ಇದರ ಅನ್ವಯ ಮೂವರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಡಿಸಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಟಿ.ನರಸೀಪುರ ತಾಲೂಕು ಕಸಬಾ ಹೋಬಳಿ ತಿರುಮಕೂಡಲು ಗ್ರಾಮದ ಸರ್ವೆ ನಂ.55/2 ರಲ್ಲಿ 22 ಗುಂಟೆ ಹಾಗೂ 55/6 ರಲ್ಲಿನ 8 ಗುಂಟೆ ಜಮೀನಿಗೆ ಅಕ್ರಮವಾಗಿ ಪೌತಿಖಾತೆ ಮಾಡಿಕೊಟ್ಟು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನಲೆ ಇವರ ವಿರುದ್ದ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Key words: creating -fake documents – Three -officers- suspended-mysore DC