ವಾಷಿಂಗ್ಟನ್, ಮೇ 01, 2020 (www.justkannada.in): ಕೊರೋನ ವೈರಸ್ ಚೀನಾದ ವೈರಾಲಜಿ ಲ್ಯಾಬ್ನಲ್ಲಿ ಸೃಷ್ಟಿಯಾಗಿರುವುದು ಖಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಆದರೆ ಅದಕ್ಕೆ ಪುರಾವೆ ನೀಡಲು ನಿರಾಕರಿಸಿದರು. ಟ್ರಂಪ್ ಅವರ ಈ ಹೇಳಿಕೆಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡುವ ನಿರೀಕ್ಷೆಯಿದೆ.
ವೂಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಈ ವೈರಸ್ ಸೃಷ್ಟಿ ಮಾಡಲಾಗಿದೆ ಎನ್ನುವುದಕ್ಕೆ ಪುರಾವೆ ನೋಡಿದ್ದೀರಾ ಎಂದು ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶ್ನಿಸಿದಾಗ, ಹೌದು; ನನ್ನಲ್ಲಿದೆ ಎಂದಷ್ಟೇ ಉತ್ತರಿಸಿ, ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ನಿಮಗೆ ಅದನ್ನು ಹೇಳಲಾರೆ; ಅದನ್ನು ಹೇಳಲು ನನಗೆ ಅವಕಾಶ ನೀಡಿಲ್ಲ ಎಂದರು. ಆದರೆ ಚೀನಾದ ಸರ್ಕಾರಿ ಸ್ವಾಮ್ಯದ ವೂಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಟ್ರಂಪ್ ಆರೋಪವನ್ನು ನಿರಾಕರಿಸಿದೆ. ಅಮೆರಿಕದ ಇತರ ಅಧಿಕಾರಿಗಳು ಕೂಡಾ ಈ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.