ನವದೆಹಲಿ,ಆ,15,2019(www.justkannada.in): ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಪ್ಲಾಸ್ಟಿಕ್ ಮುಕ್ತ ಭಾರತ ಮುಂದಿನ ಗುರಿಯಾಗಿದೆ ದೇಶದಲ್ಲಿ . ಡಿಜಿಟಲ್ ಹಣ ವರ್ಗಾವಣೆಯನ್ನು ಪ್ರೋತ್ಸಾಹಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ದೇಶದ ಎಲ್ಲೆಡೆ ಸ್ವಾತಂತ್ರ್ಯೋತ್ಸವವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಯೋಧರಿಂದ ಗೌರವ ವಂದನೆ ಸ್ವೀಕರಿಸಿದರು. ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಮಂದಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಕೆಂಪುಕೋಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಯೋಧರ ತ್ಯಾಗ- ಬಲಿದಾನಗಳನ್ನು ಸ್ಮರಿಸಿಕೊಂಡರು. ಈ ವೇಳೆ ಮಹತ್ವದ ಘೋಷಣೆ ಮಾಡುವುದಾಗಿ ತಿಳಿಸಿದರು. ಭಾರತೀಯ ಸೇನೆ ನಮ್ಮ ಹೆಮ್ಮೆ. ಸೇನೆಯಲ್ಲಿನ ಸಮನ್ವಯತೆಯನ್ನು ಹೆಚ್ಚು ಮಾಡಲು ನಾನು ಇಂದು ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡುತ್ತಿದ್ದೇನೆ. ಇನ್ನು ಮುಂದೆ ಮುಖ್ಯ ಸೇನಾ ಸಿಬ್ಬಂದಿ(Chief of Defence Staff- CDS) ಎಂಬ ಹುದ್ದೆ ಸೃಷ್ಟಿಯಾಗಲಿದೆ. ಸೇನೆ ಇನ್ನು ಮುಂದೆ ಮತ್ತಷ್ಟು ಬಲಯುತಗೊಳ್ಳಲಿದೆ ಎಂದು ಹೇಳಿದರು.
ಡಿಜಿಟಲ್ ವಹಿವಾಟಿನಿಂದ ದೇಶದ ಆರ್ಥಿಕತೆ ಹೆಚ್ಚಿಸೋಣ…
ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಪ್ಲಾಸ್ಟಿಕ್ ಗೆ ವಿದಾಯ ಹೇಳೋಣ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಶ್ರಮಿಸೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ, ನಮ್ಮ ರುಪೇ ಕಾರ್ಡ್ ಸಿಂಗಾಪುರದಲ್ಲಿ ಚಲಾವಣೆಯಗುತ್ತಿದೆ. ಡಿಜಿಟಲ್ ಹಣ ವರ್ಗಾವಣೆಯನ್ನು ಪ್ರೋತ್ಸಾಹಿಸೋಣ. ಡಿಜಿಟಲ್ ವಹಿವಾಟಿನಿಂದ ದೇಶದ ಆರ್ಥಿಕತೆ ಹೆಚ್ಚಿಸೋಣ. ಹಾಗೆಯೇ ಪ್ರವಾಸಿ ತಾಣಗಳಿಗಾಗಿ ವಿದೇಶಕ್ಕೆ ಹೋಗುವ ಬದಲು 2022ರ ಹೊತ್ತಿದೆ ದೇಶದ ಪ್ರಮುಖ 15 ಪ್ರವಾಸಿ ತಾಣಗಳಿಗೆ ಭೇಟಿ ಕೊಡೋಣ. ಈ ಮೂಲಕ ದೇಶದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.
ದೇಶದ ಮುಸ್ಲಿಂ ಸಹೋದರಿಯರು ಭಯದಿಂದ ಬದುಕುವಂತಾಗಿತ್ತು. ಆದರೆ ತ್ರಿವಳಿ ತಲಾಖ್ ರದ್ದು ಮಾಡುವ ಮೂಲಕ ಮುಸ್ಲೀಂ ಮಹಿಳೆಯರ ಸಂಕಷ್ಟ ನಿವಾರಿಸಿದ್ದೇವೆ. ಕಣಿವೆ ರಾಜ್ಯದಲ್ಲಿ ಅನಭಿವೃದ್ಧಿ, ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ 370ನೇ ವಿಧಿ ರದ್ದುಪಡಿಸುವ ಮೂಲಕ ಒಂದು ದೇಶಕ್ಕೆ ಒಂದೇ ಸಂವಿಧಾನ ಎಂಬ ಆಶಯವನ್ನು ಜಾರಿಗೆ ತರಲಾಗಿದೆ. ಒಂದು ದೇಶ ಒಂದು ಸಂವಿಧಾನ ಎಂದು ಹಿಂದೂಸ್ತಾನ ಹೇಳುತ್ತಿದೆ. ಜಿಎಸ್ ಟಿಯಿಂದ ಒಂದು ದೇಶ ಒಂದು ತೆರಿಗೆ ಸಾಕಾರವಾಗಿದೆ, ಈಗ ಒಂದು ದೇಶ ಒಂದು ಚುನಾವಣೆ ಎಂದು ಚರ್ಚೆಯಾಗುತ್ತಿದೆ ಎಂದರು.
Key words: creation – new intelligence – army- Plastic-free -India – next target- PM Modi-speech