ಬೆಂಗಳೂರು, ನವೆಂಬರ್ 10, 2021 (www.justkannada.in): ಕ್ರಿಕೆಟ್ ಟೀಮ್ ಇಂಡಿಯಾಕ್ಕೆ ಮುಂದಿನ ಎಂಟು ತಿಂಗಳ ಕಾಲ ಬಿಡುವಿಲ್ಲದಷ್ಟು ಸರಣಿಗಳು ಕಾದಿವೆ.
ನವೆಂಬರ್ನಿಂದ 2022ರ ಜುಲೈ ತನಕ ಬರೋಬ್ಬರಿ 8 ಟೆಸ್ಟ್, 9 ಏಕದಿನ ಹಾಗೂ 21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಭಾರತ ಆಡಲಿದೆ. ಈ ಅವಧಿಯಲ್ಲಿ ಒಟ್ಟು 6 ಸರಣಿಗಳನ್ನು ಭಾರತ ಆಡಲಿದೆ. ಇದರಲ್ಲಿ 4 ತವರಿನ ಸರಣಿಗಳಾದರೆ, 2 ವಿದೇಶಿ ಸರಣಿಗಳಾಗಿವೆ.
ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳನ್ನು ತವರಲ್ಲಿ ಆಡಲಾಗುವುದು. ಎರಡು ವಿದೇಶಿ ಸರಣಿಗಳಾಗಿವೆ.
ಭಾರತ ಯುಎಇಯಿಂದ ವಾಪಸಾಗುವಷ್ಟರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿ ಮೊದಲ್ಗೊಳ್ಳಲಿದೆ. ನ. 17ರಿಂದ ಡಿ.7ರ ತನಕ ನಡೆಯುವ ಈ ಸರಣಿಯಲ್ಲಿ 3 ಟಿ20, 2 ಟೆಸ್ಟ್ ಪಂದ್ಯ ಆಡಲಾಗುತ್ತದೆ.
ವರ್ಷಾಂತ್ಯ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದೊಂದು ಪೂರ್ಣ ಪ್ರಮಾಣದ ಸರಣಿಯಾಗಿದ್ದು, 3 ಟೆಸ್ಟ್, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಾಗುವುದು. ಜ. 26ರ ತನಕ ಈ ಸರಣಿ ಸಾಗಲಿದೆ.
ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಆಗಮಿಸಿ 3 ಏಕದಿನ, 3 ಟಿ20 ಪಂದ್ಯಗಳ ಸರಣಿ ಆಡಲಿದೆ. ಬಳಿಕ ಶ್ರೀಲಂಕಾ ಆಗಮನದ ಸರದಿ. ಇದು 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ.