ಬೆಂಗಳೂರು,ಮಾರ್ಚ್,29,2025 (www.justkannada.in): ರಾಜ್ಯ ಹಾಗೂ ಹೊರರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳ ಪರಿಶೀಲನೆಗೆ ಪ್ರತಿಯೊಂದು ಇಲಾಖೆಗೆ ತಲಾ ಒಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚನೆ ನೀಡಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಹೊರ ರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೊರರಾಜ್ಯದ ಗಡಿ ಕನ್ನಡಿಗರ ಸಮಸ್ಯೆಗಳ ಬಗ್ಗೆ” ಸವಿಸ್ತಾರವಾಗಿ ಸಭೆಗೆ ವಿಷಯ ಮಂಡನೆ ಮಾಡಿ, ಹೊರರಾಜ್ಯಗಳಲ್ಲಿರುವ 658 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದರು.
ಗಡಿ ಭಾಗದ ವಿಧ್ಯಾರ್ಥಿಗಳು ಮತ್ತು ಹೊರನಾಡ ಕನ್ನಡಿಗರು ದಿನ ನಿತ್ಯ ಅನುಭವಿಸುವ ಶೈಕ್ಷಣಿಕ, ಔದ್ಯೋಗಿಕ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಮುಖ್ಯ ಕಾರ್ಯದರ್ಶಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಇವುಗಳ ಪರಿಹಾರದ ಬಗ್ಗೆ ಇಲಾಖಾವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ, ಕ್ರಮಕೈಗೊಳ್ಳುವಂತೆ ಕೋರಿದರು.
ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ನೇಮಕ, ವಸತಿ ಶಾಲೆಗಳಿಗೆ ಪ್ರವೇಶ, ಉನ್ನತ ಶಿಕ್ಷಣಕ್ಕೆ ಹೊರ ರಾಜ್ಯದವರಿಗೆ ಸಮಾನ ಅವಕಾಶ, ಹೊರನಾಡ ಕನ್ನಡಿಗರಿಗೆ ಮೀಸಲಾತಿ ನಿಯಮಗಳ ಪರಿಷ್ಕರಣೆ, ಹೊರನಾಡ ವಿದ್ಯಾರ್ಥಿಗಳು ಮತ್ತು ಪತ್ರಕರ್ತರಿಗೆ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಲು ರಿಯಾಯಿತಿ ಬಸ್ ಪಾಸ್ ವ್ಯವಸ್ಥೆ ಬೇಡಿಕೆಗಳನ್ನು ಪ್ರಸ್ತಾಪಿಸಿದರು.
ಹಾಗೆಯೇ ಹೊರ ರಾಜ್ಯಗಳ ಕನ್ನಡಿಗ ಶಿಕ್ಷಣ, ಉದ್ಯೋಗ, ಮೂಲ ಸವಲತ್ತುಗಳ ಸಮಸ್ಯೆಗಳತ್ತ ಗಮನಸೆಳೆದು, ತ್ವರಿತ ಪರಿಹಾರ ಒದಗಿಸಬೇಕು ಎಂದು ಬೇವಿನಮರದ ಕೋರಿದರು.
ಸಭೆಯಲ್ಲಿ ಮಾತನಾಡಿದ ಸಿಎಸ್ ಶಾಲಿನಿ ರಜನೀಶ್, ರಾಜ್ಯ ಹಾಗೂ ಹೊರರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳ ಪರಿಶೀಲನೆಗೆ ಪ್ರತಿಯೊಂದು ಇಲಾಖೆಗೆ ತಲಾ ಒಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಪ್ರತಿ ಗಡಿ ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಗಡಿ ಸಮಸ್ಯೆ ವಿಷಯಗಳನ್ನು ಚರ್ಚಿಸಬೇಕು. ಈ ಸಭೆಗಳಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಬೇಕು. ಗಡಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡ ನಿರಂತರವಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಿದರು.
ಕೇರಳ ರಾಜ್ಯದ ಗಡಿ ಪ್ರದೇಶಗಳ ಹೆಸರುಗಳನ್ನ ಮಲೆಯಾಳೀಕರಣ ಮಾಡುತ್ತಿರುವ ಬಗ್ಗೆ ಇರುವ ಕಾನೂನಾತ್ಮಕ ಅವಕಾಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗೆ ಡಾ.ಶಾಲಿನಿ ರಜನೀಶ್ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಾತನಾಡಿ ವಿವಿಧ ವಸತಿ ನಿಲಯಗಳ ಪ್ರವೇಶಾತಿಗೆ ಹೊರ ರಾಜ್ಯದ ಗಡಿ ಕನ್ನಡಿಗರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Key words: nodal officers, borders, Kannadigas, problems, CS, Shalini Rajneesh