ಮಾವಿನ ಹಣ್ಣಿನ ಅಂಚೆ ಪಾರ್ಸೆಲ್‌ ಸೇವೆಗೆ ಗ್ರಾಹಕ ಖುಷ್‌

ಬೆಂಗಳೂರು:ಜೂ-12: ಮಾವು ಬೆಳೆಗಾರರ ಅನುಕೂಲಕ್ಕಾಗಿ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರಾಟ ನಿಗಮ ಇದೇ ಮೊದಲ ಬಾರಿಗೆ ಅಂಚೆ ಪಾರ್ಸೆಲ್‌ ಸೇವೆಯನ್ನು ಆರಂಭಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೇವೆ ಆರಂಭಿಸಿದ ಒಂದು ತಿಂಗಳಲ್ಲಿ ಸುಮಾರು 2.6 ಲಕ್ಷ ರೂ.ವಹಿವಾಟು ನಡೆದಿದೆ.

ರಾಜ್ಯದ ನಾನಾ ಕಡೆಗಳಲ್ಲಿರುವ ಮಾವು ಬೆಳೆಗಾರರ ಅನುಕೂಲಕ್ಕಾಗಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಹಲವು ಮಾರಾಟ ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ ಅಂಚೆ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣಿನ ಪಾರ್ಸೆಲ್‌ ನೀಡುವ ಸೇವೆ ಕೂಡ ಸೇರಿದೆ.

ಈ ಹಿಂದೆ ರಾಜ್ಯ ಮಾವು ಅಭಿವೃದ್ಧಿ ನಿಗಮ, ಬಿಗ್‌ ಬಾಸ್ಕೆಟ್‌, ರಿಲಯನ್ಸ್‌ ಸೇರಿದಂತೆ ಹಲವು ಆನ್‌ಲೈನ್‌ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಇದರ ಜೊತೆಗೆ ಭಾರತೀಯ ಅಂಚೆ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ಪಾರ್ಸೆಲ್‌ ಮೂಲಕ ನೇರವಾಗಿ ತಲುಪಿಸುವ ವ್ಯವಸ್ಥೆಯನ್ನು ಈ ವರ್ಷದಿಂದ ಆರಂಭಿಸಿದೆ.

ಕೆಲವು ದಿನಗಳ ಹಿಂದೆ ಈ ಮಾರಾಟ ಸೇವೆ ಆರಂಭವಾಗಿದ್ದು, ಈಗಾಗಲೇ ವಿವಿಧ ಮಾವಿನ ತಳಿಯ ಸುಮಾರು 600 (ಪ್ರತಿ 3 ಕೆ.ಜೆ ಬಾಕ್ಸ್‌) ಬಾಕ್ಸ್‌ಗಳು ಮಾರಾಟವಾಗಿವೆ. ಅಲ್ಲದೆ, ಇಲ್ಲಿಯವರೆಗೆ ಸುಮಾರು 2.6 ಲಕ್ಷ ರೂ.ವಹಿವಾಟು ನಡೆದಿದೆ ಎಂದು ಮಾವು ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಭಾಗದ ರೈತರು ಮಾತ್ರ ಮಾವಿನ ಹಣ್ಣುಗಳನ್ನು ಅಂಚೆ ಸೇವೆ ಮೂಲಕ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಅಂಚೆ ಪಾರ್ಸೆಲ್‌ ಸೇವೆ ಆರಂಭವಾಗುವ ಮೊದಲು ಕೇವಲ 20 ರೈತರು ಮಾವಿನ ಹಣ್ಣುಗಳನ್ನು ಅಂಚೆ ಮೂಲಕ ಮಾರಾಟ ಮಾಡುತ್ತಿದ್ದರು. ಈಗ ರೈತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಮುಂದಿನ ವರ್ಷ ಈ ಸಂಖ್ಯೆ ಮತ್ತಷ್ಟು ದ್ವಿಗುಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಂಚೆ ಗ್ರಾಹಕರು ಹೆಚ್ಚಾಗುತ್ತಿದ್ದಾರೆ: ಇದೇ ಮೊದಲ ಬಾರಿಗೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಅಂಚೆ ಪಾರ್ಸೆಲ್‌ ಸೇವೆ ಆರಂಭಿಸಿದ್ದು, ಈ ಸಂಬಂಧ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಪ್ರಧಾನ ಅಂಚೆ ಕಚೇರಿಯಲ್ಲಿ ಈಗಾಗಲೇ ಪ್ರತೇಕ ಕೊಠಡಿ ತೆರೆಯಲಾಗಿದೆ. ದಿನೇ ದಿನೇ ಮಾವಿನ ಹಣ್ಣು ಖರೀದಿಸುವ ಅಂಚೆ ಪಾರ್ಸೆಲ್‌ ಗ್ರಾಹಕರು ಕೂಡ ಹೆಚ್ಚಾಗುತ್ತಿದ್ದಾರೆ.

ಬೇರೆ ಜಿಲ್ಲೆಗಳಿಂದಲೂ ಬೇಡಿಕೆ: ಶಿವಮೊಗ್ಗ, ತುಮಕೂರು ಸೇರಿದಂತೆ ರಾಜ್ಯ ವಿವಿಧ ಕಡೆಗಳಿಂದ ಮಾವಿನ ಹಣ್ಣನ್ನು ಗ್ರಾಹಕರು ಅಂಚೆ ಸೇವೆ ಮೂಲಕ ಕೇಳುತ್ತಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ಬೆಂಗಳೂರು ಬಿಟ್ಟು , ಬೇರೆ ಜಿಲ್ಲೆಗಳಲ್ಲಿರುವ ಗ್ರಾಹಕರಿಗೆ ಮಾವಿನ ಹಣ್ಣನ್ನು ನೀಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಈ ಸೇವೆ ಆರಂಭಿಸುವ ಚಿಂತನೆ ನಡೆದಿದೆ. ಇದಕ್ಕಾಗಿ ವಿಶೇಷ ರೀತಿಯಲ್ಲಿ ನಿಗಮ ಸಜ್ಜಾಗಲಿದೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕ ಲಲಿತಾ ತಿಳಿಸಿದರು.

ಆನ್‌ಲೈನ್‌ ಬುಕ್‌ ಹೇಗೆ?: ಮಾವಿನ ಹಣ್ಣಿನ ಗ್ರಾಹಕರು, ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರಾಟ ನಿಗಮದ ವೆಬ್‌ಸೈಟ್‌ (https://karsirimangoes.karnataka.gov.in/) ಸಂಪರ್ಕಿಸಿದರೆ ಇಲ್ಲಿ ನೋಂದಾಯಿತ ಮಾವಿನ ಹಣ್ಣಿನ ವಿಭಾಗ ತೆರೆದುಕೊಳ್ಳುತ್ತದೆ. ಜತೆಗೆ, ಗ್ರಾಹಕರಿಗೆ ಬೇಕಾದ ಮಾವಿನ ತಳಿ ಮತ್ತು ದರದ ಬಗ್ಗೆ ಪೂರ್ಣ ಮಾಹಿತಿ ಸಿಗಲಿದೆ.

ಗ್ರಾಹಕರು ತಮಗೆ ಬೇಕಾದ ಮಾವಿನ ಹಣ್ಣಿನ ತಳಿಯ ಮೇಲೆ ಕ್ಲಿಕ್‌ ಮಾಡಿದರೆ ಅಂಚೆ ಶುಲ್ಕ ಮತ್ತು ಮಾವಿನ ಹಣ್ಣಿನ ದರದ ಮಾಹಿತಿ ಸಿಗಲಿದೆ. ಹೀಗೆ, ಬುಕ್‌ ಆದ ಕೂಡಲೇ ಅಂಚೆ ಇಲಾಖೆಗೆ ಮತ್ತು ರೈತರಿಗೆ ಇ-ಮೇಲ್‌ ಮತ್ತು ಅಂಚೆ ಮೂಲಕ ಸಂದೇಶ ರವಾನೆಯಾಗಲಿದೆ. ರೈತರು ಉತ್ತಮ ರೀತಿಯಲ್ಲಿ ಪ್ಯಾಕ್‌ ಮಾಡಿ ಅಂಚೆ ಇಲಾಖೆಗೆ ತಲುಪಿಸುತ್ತಾರೆ.

ಮಾವಿನ ಹಣ್ಣಿನ ಅಂಚೆ ಪಾರ್ಸೆಲ್‌ ಸೇವೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ರಾಜ್ಯವ್ಯಾಪಿ ವಿಸ್ತಾರ ಮಾಡುವ ಆಲೋಚನೆ ಇದೆ.
-ಡಾ.ಸಿ.ಜಿ.ನಾಗರಾಜು, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ನಿರ್ದೇಶಕ
ಕೃಪೆ:ಉದಯಾವಾಣಿ

ಮಾವಿನ ಹಣ್ಣಿನ ಅಂಚೆ ಪಾರ್ಸೆಲ್‌ ಸೇವೆಗೆ ಗ್ರಾಹಕ ಖುಷ್‌
customer-khush-for-postal-parcel-service-for-mango-fruit