ಮೈಸೂರು,ಜೂನ್,5,2021(www.justkannada.in): ಡಿ.ದೇವರಾಜ ಅರಸು ಅವರ 39ನೇ ಪುಣ್ಯಸ್ಮರಣೆ ಪ್ರಯುಕ್ತ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಾವಿರ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರ, 500 ಕಂಪ್ಯೂಟರ್ ಗಳನ್ನು ವಿತರಿಸಲಾಗುವುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ, ರಘು ಆರ್.ಕೌಟಿಲ್ಯ. ಡಿ.ದೇವರಾಜ ಅರಸು ಅವರ ೩೯ನೇ ಪುಣ್ಯಸ್ಮರಣೆ ಪ್ರಯುಕ್ತ ಭಾನುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಇರುವ ಅರಸು ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಲಾರ್ಪಣೆ ಮಾಡಲಿದ್ದಾರೆ. . ಕೋವಿಡ್ ಸಂಕಷ್ಟದ ಕಾಲದಲ್ಲಿ ಉದ್ಯೋಗ ಇಲ್ಲದವರು, ಕುಲಕಸುಬು ವೃತ್ತಿಯನ್ನು ಅವಲಂಬಿಸಿಕೊಂಡು ಬಂದವರು ತುಂಬಾ ಜನರು ಇದ್ದಾರೆ. ಬಡವರು, ವೃತ್ತಿ ಕಸುಬು ಮಾಡಿಕೊಂಡೂ ಬಂದಿದ್ದವರ ಆರ್ಥಿಕ ಶಕ್ತಿ ಕುಗ್ಗಿ ಹೋಗಿದೆ. ಹೀಗಾಗಿ,ಅರಸು ಪುಣ್ಯಸ್ಮರಣೆ ಪ್ರಯುಕ್ತ ಎರಡು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ನಿಗಮದ ವ್ಯಾಪ್ತಿಗೆ ಬರುವ ಬಡವರಲ್ಲಿ ತಲಾ ಒಂದುಸಾವಿರ ಮಂದಿ ಫಲಾನುಭವಿಗಳನ್ನು ಗುರುತಿಸಿ ಹೊಲಿಗೆ ಯಂತ್ರ, ನಿರುದ್ಯೋಗಿ ಯುವಕರಿಗೆ ಕಂಪ್ಯೂಟರ್ ವಿತರಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಎರಡು ಯೋಜನೆಗಳಿಗೂ ಅನುಮೋದನೆ ನೀಡಿದ್ದಾರೆ. ಸರ್ಕಾರದಿಂದ ಆದೇಶ ಹೊರ ಬೀಳುತ್ತಿದ್ದಂತೆ ಫಲಾನುಭವಿಗಳ ಆಯ್ಕೆಗೆ ಅರ್ಜಿಗಳನ್ನು ಕರೆಯಲಾಗುವುದು. ಯೋಜನೆಗೆ ಎಷ್ಟು ಅನುದಾನ ಬೇಕಾಗಿದೆ ಎನ್ನುವುದನ್ನು ಲೆಕ್ಕ ಹಾಕಿಲ್ಲ. ಮುಖ್ಯಮಂತ್ರಿಗಳು ನಮ್ಮ ಪ್ರಸ್ತಾವನೆಯನ್ನು ಒಪ್ಪಿದ್ದಾರೆ. ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂದರು.
ಮೈಸೂರು ನಗರದಲ್ಲಿ ಡಿ. ದೇವರಾಜ ಅರಸು ಪ್ರತಿಮೆ, ಸಮುದಾಯಭವನ ನಿರ್ಮಾಣ, ವೃತ್ತಿ ಆಧಾರಿತ ಸಮುದಾಯಕ್ಕೆ ತರಬೇತಿ ನೀಡಲು ಅರಸು ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲೂ ತರಬೇತಿ ಕೇಂದ್ರಗಳನ್ನು ಆರಂಭಿಸಲು ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ರಘು ಕೌಟಿಲ್ಯ ತಿಳಿಸಿದರು.
Key words: D. Devaraja arsu- backward- classes-development-corporation -Raghu R. Kautilya-mysore