ವಿಜಯಪುರ,ನವೆಂಬರ್, 12,2021(www.justkannada.in): ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅವರು ದಲಿತ ಸಮುದಾಯದ ವ್ಯಕ್ತಿಯನ್ನು ಸಿ.ಎಂ. ಮಾಡಿ ತೋರಿಸಲಿ. ಕಾಂಗ್ರೆಸ್ ಅಧಿಕಾರ ಬಂದ ಬಳಿಕ ದಲಿತ ಸಿಎಂ ಬಗ್ಗೆ ಮಾತನಾಡುತ್ತೇವೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸವಾಲು ಹಾಕಿದರು.
ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಂ.ಬಿ ಪಾಟೀಲ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ದಲಿತ ಸಿಎಂ ಬಗ್ಗೆ ಚರ್ಚೆ ನಡೆಯಲಿದೆ. ದಲಿತ ಸಿಎಂ ಕುರಿತು ಪಕ್ಷ ನಿರ್ಧಾರ ಮಾಡುತ್ತದೆ. ಮೊದಲು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಈಗ ನಾವು ಅಧಿಕಾರದಲ್ಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿ.ಎಂ. ವಿಷಯ ಚರ್ಚೆ ಅಪ್ರಸ್ತುತ ಎಂದು ನುಡಿದರು.
ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿ ಸೇರುತ್ತಾರೆ ಎಂಬ ಹೇಳಿಕೆ ನೀಡಿರುವ ಆರೋಪ ಸಿದ್ಧರಾಮಯ್ಯ ವಿರುದ್ಧ ಕೇಳಿ ಬಂದಿರುವ ಹಿನ್ನೆಲೆ ಈ ಕುರಿತು ಮಾತನಾಡಿದ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ದಲಿತರ ವಿರುದ್ಧ ಎಲ್ಲೂ ಮಾತನಾಡಿಲ್ಲ. ಆದರೂ ದಲಿತ ವಿರೋಧಿ ಎಂಬಂತೆ ಬಿಜೆಪಿ ಹೋರಾಟ ನಡೆಸುತ್ತಿರುವುದು ರಾಜಕೀಯ ಸಣ್ಣತನ. ದಲಿತರ ಬಗ್ಗೆ ಕಾಳಜಿ, ಬದ್ಧತೆ ಇರುವ ಸಿದ್ದರಾಮಯ್ಯ ದಲಿತರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ದಲಿತರ ಬಗ್ಗೆ ಅವರಿಗೆ ಇರುವಷ್ಡು ಕಾಳಜಿ ಬೇರೆ ಯಾರಿಗೂ ಇಲ್ಲ. ಸಿದ್ದರಾಮಯ್ಯ ಅವರ ದಲಿತ ಪರ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ತಿರುಗೇಟು ನೀಡಿದರು.
ದಲಿತರನ್ನು ಬಳಸಿಕೊಂಡು ಬಿಜೆಪಿ ರಾಜಕಾರಣ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡು ಪ್ರತಿಭಟನೆ ಮಾಡುತ್ತಿದೆ ಎಂದು ಎಂ ಬಿ ಪಾಟೀಲ್ ಹರಿಹಾಯ್ದರು.
Key words: Dalit CM –issue-Former minister -MB Patil-challenged – BJP.