ನಾಡಹಬ್ಬ ದಸರ ಆಚರಣೆ ನಮ್ಮ ಸಂಸ್ಕ್ರತಿ, ಪರಂಪರೆಯ ಹೆಗ್ಗುರುತು. ಈ ನಿಟ್ಟಿನಲ್ಲಿ ಸಂಸ್ಕೃತಿಯ ಅರಿವು ಶಿಕ್ಷಣದ ಒಂದು ಭಾಗವಾಗಬೇಕು. ಹಾಗಾದಾಗ ಮಾತ್ರ ಭಾರತೀಯ ಸಂಸ್ಕೃತಿಗೆ ಶಕ್ತಿ ಬರಲು ಸಾಧ್ಯ ಎಂದು ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹ ಕರೆ ನೀಡಿದರು.
ಅವರು ಇಂದು ಕೌಟಿಲ್ಯ ವಿದ್ಯಾಲಯದಲ್ಲಿ ಹಮ್ಮಿ ಕೊಳ್ಳಲಾಗಿದ್ದ ದಸರ ಗೊಂಬೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೊಂಬೆ ಕೂರಿಸುವುದು ಕೇವಲ ಒಂದು ಮನೋರಂಜನೆಯಲ್ಲ, ಅದು ಒಂದು ಆಚಾರ ಮತ್ತು ವಿಚಾರ. ನಮ್ಮ ಪರಂಪರೆಯಲ್ಲಿ ನಡೆದು ಬಂದಿರುವ ಒಂದು ಅರ್ಥಪೂರ್ಣ ಸಂಪ್ರದಾಯ. ಈ ಸಂಪ್ರದಾಯವು ಕೇವಲ ಸಡಗರಕ್ಕಷ್ಟೇ ಮೀಸಲಾಗಿರದೇ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವುದೂ ಇದರ ಉದ್ದೇಶವಾಗಿದೆ. ಆದ್ದರಿಂದಲೇ, ಇದಕ್ಕೆ ನಮ್ಮ ಹಿರಿಯರು ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ. ಕೌಟಿಲ್ಯ ವಿದ್ಯಾಲಯದಲ್ಲಿ ಇದು ಅತ್ಯಂತ ಅರ್ಥಪೂರ್ಣ ಹಾಗೂ ಅಚ್ಚು ಕಟ್ಟಾಗಿ ಜೋಡಿಸಿ ಪ್ರದರ್ಶಿಸಲ್ಪಟ್ಟಿರುವ ನೂರಾರು ಗೊಂಬೆಗಳು ಉತ್ತಮ ಸಂದೇಶವನ್ನು ಹೇಳುತ್ತವೆ. ಐತಿಹಾಸಿಕ ದಸರಾ ಹಬ್ಬಕ್ಕೆ ಕೆಲವೇ ದಿನಗಳಿರುವಾಗ ಇಂದು ಆಚರಿಸಿಲಟ್ಟಿರುವ ಈ ಗೊಂಬೆಗಳ ಹಬ್ಬ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಮುನ್ನಡಿ ಬರೆದಂತಿದೆ ಎಂದು ಶ್ಲಾಘಿಸಿದರು.
ಇಂದಿನ ಪ್ರದರ್ಶನದಲ್ಲಿ ಪಟ್ಟದ ಗೊಂಬೆಗಳು, ಹಳ್ಳಿ ಸೊಬಗು, ಕೈಲಾಸ ಪರ್ವತ, ಚನ್ನಪಟ್ಟಣದ ಗೊಂಬೆಗಳು, ಕೃಷ್ಣಲೀಲೆ, ದಶಾವತಾರ, ರಾಮಯಣವನ್ನು ಬಿಂಬಿಸುವ ಗೊಂಬೆಗಳನ್ನು ಪ್ರದರ್ಶಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ಪೋಷಕರು, ಮಕ್ಕಳು ಹಾಗೂ ಶಿಕ್ಷಕ ವರ್ಗದವರೊಡಗೂಡಿ ನಡೆಸಿಕೊಟ್ಟ ‘ದಾಂಡಿಯ ನೃತ್ಯ’ ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿತ್ತು.
ಸಂಸ್ಥೆಯ ಅಧ್ಯಕ್ಷ ಆರ್. ರಘುರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೌಟಿಲ್ಯ ವಿದ್ಯಾಲಯದ ಪೂರ್ವಪ್ರಾರ್ಥಮಿಕ ವಿಭಾಗದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ನೇಹ, ಇತರ ಶಿಕ್ಷಕಿಯರು, ನೂರಾರು ಪೋಷಕರು ಹಾಗೂ ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Key words: Dasara Doll- Festival- mysore- Kautilya College-ASP-sneha