ಮೈಸೂರು,ಅಕ್ಟೋಬರ್,5,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು ಈ ನಡುವೆ ದಸರಾ ಸಮಯದಲ್ಲಿ ಮೈಸೂರು ರೈಲು ವಸ್ತು ಸಂಗ್ರಹಾಲಯ ದೀಪಾಲಂಕಾರದೊಂದಿಗೆ ಕೆಲಸದ ಸಮಯ ವಿಸ್ತರಣೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆ ವಲಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಡಾ.ಮಂಜುನಾಥ್ ಕನಮಡಿ, ಮೈಸೂರು ಸಾರ್ವಜನಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದಸರಾ ಹಬ್ಬದ ಸಮಯದಲ್ಲಿ 07.10.2021 ರಿಂದ 15.10.2021 ರವರೆಗೆ ದೀಪಾಲಂಕಾರಗಳೊಂದಿಗೆ ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದ ಕೆಲಸದ ಸಮಯವನ್ನು 20:00 ಗಂಟೆಗಳವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೆ ವಸ್ತು ಸಂಗ್ರಹಾಲಯದ ಎಲ್ಲಾ ವಿಂಟೇಜ್ ಸ್ಟೀಮ್ ಲೋಕೋಮೋಟಿವ್‌ಗಳು, ಕೋಚ್‌ಗಳು, ತಪಾಸಣಾ ಗಾಡಿಗಳು, ಸರಕು ವ್ಯಾಗನ್ ಗಳು, ಕ್ರೇನ್, ಆಟಿಕೆ ರೈಲು ಮತ್ತು ಇತರ ಎಲ್ಲ ಹೊರಾಂಗಣ ಪ್ರದರ್ಶನದ ವಸ್ತುಗಳನ್ನು ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡಲು ದೀಪಗಳಿಂದ ಅಲಂಕೃತಗೊಳಿಸಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ 12.10.2021 (ಮಂಗಳವಾರ) ವಾರದ ರಜೆ ಇರುವುದಿಲ್ಲ.
ಪ್ರವಾಸಿಗರು ಯಾವುದೇ ಕೈಚೀಲಗಳು, ಬ್ಯಾಕ್ ಪ್ಯಾಕ್‌ಗಳನ್ನು ರೈಲ್ವೆ ವಸ್ತು ಸಂಗ್ರಹಾಲಯ ಆವರಣಕ್ಕೆ ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ. ಹೊರಗಿನಿಂದ ತಂದ ಆಹಾರ, ಪಾನೀಯಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ವಾಗತ ಕೌಂಟರ್ ನಲ್ಲಿ ನಿಗದಿತ ಶುಲ್ಕಗಳನ್ನು ಪಾವತಿಸಿದ ನಂತರ ಎಸ್‌ಎಲ್‌ಆರ್/ಡಿಎಸ್‌ಎಲ್‌ಆರ್‌ನೊಂದಿಗೆ ಸ್ಥಿರ ಛಾಯಾಗ್ರಹಣವನ್ನು ಅನುಮತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನೈಋತ್ಯ ರೈಲ್ವೆ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಅವರು, ಭೇಟಿ ನೀಡುವ ಸಂದರ್ಶಕರು ರೈಲು ವಸ್ತು ಸಂಗ್ರಹಾಲಯ ಆವರಣದಲ್ಲಿರುವ ಸಮಯದಲ್ಲಿ ಕೋವಿಡ್ ಸಂಬಂಧಿತ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡಿದ್ದಾರೆ.
ಹಾಗೆಯೇ ಕೋವಿಡ್ ಗೆ ಸೂಕ್ತವಾದ ನಡವಳಿಕೆಯನ್ನು ಕಾರ್ಯಗೊತಗೊಳಿಸಲು, ಯಾವುದೇ ಸಮಯದಲ್ಲಿ ಭೇಟಿ ನೀಡುವವರನ್ನು ನಿರ್ಬಂಧಿಸುವ ಹಕ್ಕನ್ನು ರೈಲ್ವೆ ಹೊಂದಿದೆ. ರೈಲ್ವೆ ವಸ್ತು ಸಂಗ್ರಹಾಲಯ ಆವರಣದಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅವರು ಸಂದರ್ಶಕರ ಸಂಪೂರ್ಣ ಸಹಕಾರವನ್ನು ಕೋರಿದ್ದಾರೆ.
Key words: Dasara Mahotsava- Lighting – Mysore Railway Museum- Extension -working hours