ಮೈಸೂರು,ಅಕ್ಟೋಬರ್,20,2020(www.justkannada.in) : ಕೊರೋನಾ ಕರೆಯದೆ ಬರುವ ಅತಿಥಿ. ಎಲ್ಲಿ, ಹೇಗೆ?, ಯಾವಾಗ?, ಯಾರಿಂದ? ಬಂತು ಎಂದು ಗೊತ್ತಾಗುವುದಿಲ್ಲ. ಬಂದ ಮೇಲೆ ಇಡೀ ಮನೆಯನ್ನೇ ಹೊಕ್ಕಿಬಿಡುತ್ತದೆ. ಅದರಲ್ಲಿ ಎಷ್ಟು ಜನ ಉಳಿಯುವರು, ಅಳಿಯುವರು ಎಂದು ತಿಳಿಯುವ ಮುನ್ನವೇ ಕಾಲ ಮಿಂಚಿಹೋಗಿರುತ್ತದೆ ಎಂದು ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಅನುಭವದ ಮಾತನ್ನು ಹೇಳಿದ್ದಾರೆ. ದಸರಾ ಮಹೋತ್ಸವದ ಝಗಮಗಿಸುವ ಬೆಳಕು ನೋಡುವುದಕ್ಕೆ ಹದಿಹರೆಯದವರು, ಮಕ್ಕಳು ಹೆಚ್ಚಿನದಾಗಿ ಭಾಗವಹಿಸುತ್ತಿದ್ದು, ವಿಡಿಯೋಗಳು, ಸೆಲ್ಫಿಗಳಲ್ಲಿ ಮುಳುಗುತ್ತಿದ್ದಾರೆ. ದಸರೆಯು ಈ ವರ್ಷವೂ ರಂಗೇರಿದೆ. ಆದರೆ, ಬಹುತೇಕರು ಕೊರೊನಾ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರವಿಲ್ಲ. ಇಂತಹ ಸಂದರ್ಭದಲ್ಲಿ ನಾವಾಗಲೀ, ನಮ್ಮ ಮನೆಯವರನ್ನಾಗಲೀ, ದಸರೆಯ ಜನಜಂಗುಳಿಯ ಕೂಪಕ್ಕೆ ಕರೆತರುವುದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂದು ಯೋಚಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಗುಣಮುಖನಾಗಿ ನನ್ನ ಅನುಭವ
ದಸರೆಯ ಸಂಭ್ರಮಕ್ಕಿಂತ ಕೊರೋನಾದ ರೌದ್ರನರ್ತನ ಭಯಾನಕವಾಗಿದೆ. ನನಗೆ ಕೊರೋನ ದೃಢವಾಗಿತ್ತು. ಅಂದಿನಿಂದ ನನ್ನ ವಾಸ ನನ್ನ ಮನೆಯ ಮಹಡಿಯ ಮೇಲಿದ್ದ ಒಂದು ಕೊಠಡಿ. 18 ದಿನ ವೈದ್ಯರು ಕೊಟ್ಟ ಔಷಧವನ್ನು ಸಮಯಕ್ಕನುಸಾರವಾಗಿ ತೆಗೆದುಕೊಂಡು ಆರೋಗ್ಯವನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡೆ. ಅಂತೂ 18 ದಿನಗಳ ಬಳಿಕ ಪರೀಕ್ಷೆಯನ್ನು ಮಾಡಿಸಿದ ಬಳಿಕ ನೆಗೆಟಿವ್ ಬಂದಿತು. ಈ ಮಧ್ಯೆ ನನ್ನ ಆಪ್ತ ಸ್ನೇಹಿತರಿಬ್ಬರು ಕೊರೋನಾದಿಂದ ಮೃತಪಟ್ಟರು ಎಂಬ ಸುದ್ದಿ ಕೇಳಿ ಬೇಸರವಾಯಿತು. ಹೀಗಾಗಿ, ನಮ್ಮವರನ್ನು ಕಳೆದುಕೊಳ್ಳುವ ಬದಲಿಗೆ ಎಚ್ಚರಿಕೆಯಿಂದ ನಾವು, ನಮ್ಮವರನ್ನು ಸುರಕ್ಷಿತವಾಗಿಡುವ ಕಾರ್ಯವಾಗಬೇಕು ಎಂದಿದ್ದಾರೆ.
ನಮ್ಮ ಆರೋಗ್ಯದ ಬಗ್ಗೆ ನಾವು ಜಾಗರೂಕರಾಗಬೇಕು
ಎಲ್ಲಿ ಹೋಗುತ್ತೇವೆ, ಯಾರ ಜೊತೆ ಎಷ್ಟು ಅಂತರ ಕಾಪಾಡುತ್ತೇವೆ ಎನ್ನುವುದು ಈ ಸಂಕಷ್ಟದ ಸಮಯದಲ್ಲಿ ಬಹಳ ಮುಖ್ಯ ನಮ್ಮ ಮಕ್ಕಳಿಗೆ ಒಂದು ಸಣ್ಣ ಇರುವೆ ಕಚ್ಚಿದರೂ ಗಾಬರಿಗೊಳ್ಳುವ ನಾವು ಇಂದು ಕೊರೋನಾಕ್ಕೆ ಆಹ್ವಾನ ನೀಡಲು ಬಯಸುವೆವೆ? ಮಕ್ಕಳನ್ನು ಆಟಕ್ಕೆ ಸರಿಯಾಗಿ ಕಳಿಹುಸಿತ್ತಿಲ್ಲ, ಶಾಲೆಗೆ ಕಳುಹಿಸುತ್ತಿಲ್ಲ, ಗುಂಪು ಸೇರುವ ಜಾಗಗಳು, ಮದುವೆ ಎಲ್ಲಿಯೂ ಕಳಿಸದಂತ್ತಾಗಿದೆ. ಹೀಗಿರುವಾಗ ದಸರೆಯಂತಹ ಜನಜಂಗುಳಿಯ ನಡುವೆ ಕರೆತರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಮ್ಮ ಹಾಗೂ ಎಲ್ಲರ ರಕ್ಷಣೆ ನಮ್ಮ ಹೊಣೆ
ದಸರೆಯನ್ನು ಅರ್ಥಗರ್ಭಿತವಾದ ಸಂಸ್ಕಾರ ಹಾಗೂ ಸಂದೇಶವನ್ನು ಸಾರುವ ಕಾರಣ ಆಚರಣೆಯನ್ನು ನಿಲ್ಲಿಸದೇ, ಮುಂಬರುವ ಅಪಾಯದ ಅರಿವಿದ್ದರೂ ಸಹ ನಮ್ಮ ಸರಕಾರವು ಕೊರೊನಾ ಸಮಸ್ಯೆ ಬಗೆಹರಿಸುವಂತೆ ತಾಯಿ ಚಾಮುಂಡಿಯ ಮುಂದೆ ನಿಂತಿರುವಂತೆ ಭಾಸವಾಗುತ್ತಿದೆ. ಆರಕ್ಷಕರು, ಪತ್ರಕರ್ತರು, ಮಾಧ್ಯಮದವರು, ವೈದ್ಯರು, ಮಾವುತರು, ಚಾಲಕರು, ಪಾಲಕರು, ಪೌರಕಾರ್ಮಿಕರ ರಕ್ಷಣೆಯು ನಮ್ಮ ಹೊಣೆಯಾಗಿದೆ ಎಂದು ಸಲಹೆ ನೀಡಿದ್ದಾರೆ.
ದೂರದರ್ಶನದಿಂದಲೇ ವೀಕ್ಷಿಸಿ ಆನಂದಿಸೋಣ
ಈ ವರ್ಷದ ಸಂಭ್ರಮವನ್ನು ನಾವು ನಮ್ಮ ಮನೆಗಳಲ್ಲಿಯೇ ಆಚರಿಸೋಣ. ಬೆಟ್ಟದ ಅಮ್ಮನನ್ನು ನಮ್ಮ ಮನೆಗಳಿಗೆ ವಿಜೃಂಭಣೆಯಿಂದ ಬರಮಾಡಿಕೊಳ್ಳೋಣ. ನಮ್ಮ ಪ್ರೀತಿ, ನಂಬುಗೆಗಳನ್ನು ನಮ್ಮ ಭಕ್ತಿಯನ್ನು ನಮ್ಮ ಮನೆಯಲ್ಲಿಯೇ ತೋರ್ಪಡಿಸಿಕೊಳ್ಳೋಣ. ಇತರೆ ದಸರೆಯ ವೈಭೋಗವನ್ನು ನಮ್ಮ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಬಿಟ್ಟು ಅವರು ಆಚರಿಸುವ ಪರಿಯನ್ನು ದೂರದರ್ಶನದಿಂದಲೇ ವೀಕ್ಷಿಸಿ ಆನಂದಿಸೋಣ.
ಮನೆಯೇ ಮಂತ್ರಾಲಯ
ಕೊರೊನಾ ಮಾರ್ಗಸೂಚಿ ಅನುಸರಿಸುವುದು ದಸರೆಯ ನಂತರದ ಕೊರೋನಾ ಸ್ಫೋಟವನ್ನು ನಿಲ್ಲಿಸುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತದೆ. ಕೊರೋನಾ ಅನ್ನುವ ಶಬ್ಧವನ್ನು ನಮ್ಮ ಮೈಸೂರಿನಿಂದ, ತಾಯಿಯ ಆಶೀರ್ವಾದದಿಂದ ಹೊಡೆದೋಡಿಸೋಣ. ಸ್ತಬ್ಧವಾಗುವುದಿಲ್ಲವಾದರೂ ಇದನ್ನು ಕಡಿಮೆ ಮಾಡುವ ಕಡೆ ಗಮನ ಹರಿಸೋಣ. ಅದು ನಮ್ಮದೇ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿದ್ದಾರೆ.
key words : “Dasara V / S Corona-talk-experience-former- members-poli …!