ಮಂಡ್ಯ,ಜನವರಿ,20,2025 (www.justkannada.in): ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಇಂದು ಮದ್ದೂರಿನ ರುದ್ರಾಕ್ಷಿ ಪುರದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿ 33 ಮಂದಿಗೆ ಗಾಯವಾಗಿದ್ದು, ಗಾಯಗೊಂಡಿರುವ ಎಲ್ಲಾ ಪ್ರಯಾಣಿಕರಿಗೆ ಮದ್ದೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈ ಮಧ್ಯೆ ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅತಿ ಅವಶ್ಯಕತೆ ಇರುವಂತಹ ತುರ್ತು ಪರಿಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ಅವಶ್ಯಕವಿದ್ದಲ್ಲಿ ಮಿಮ್ಸ್ ಗೆ ಹಾಗೂ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಲ್ಲಿ, ಅದರ ಖರ್ಚು ವೆಚ್ಚವನ್ನು ಕೆ ಎಸ್ ಆರ್ ಟಿಸಿ ವತಿಯಿಂದ ಭರಿಸುವಂತೆ ನಿರ್ದೇಶನ ನೀಡಿದರು. ಪರಿಸ್ಥಿತಿ ಅವಲೋಕಿಸಿದರೆ ಸಣ್ಣ ಪುಟ್ಟ ಗಾಯಗಳಾಗಿದ್ದು ಎರಡು-ಮೂರು ಜನರಿಗೆ ಹೆಚ್ಚು ಗಾಯಗೊಂಡಿದ್ದು, ಅವರನ್ನು ಮಿಮ್ಸ್ ಅಥವಾ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಪ್ರಥಮ ಆದ್ಯತೆ ಮೇಲೆ ಸ್ಥಳಾಂತರಗೊಳಿಸಲು ವೈದ್ಯಾಧಿಕಾರಿಗಳಿಗೆ ಡಿಸಿ ಕುಮಾರ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮೋಹನ್, ಕೆ.ಎಸ್.ಆರ್.ಟಿಸಿ ಜಿಲ್ಲಾ ನಿಯಂತ್ರಕ ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Key words: accident, 33 people, injured, DC, visits, hospital