ಬೆಂಗಳೂರು,ಸೆಪ್ಟಂಬರ್,2,2020(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಜಡತ್ವ ಬಿಟ್ಟು ಕೆಲಸ ಮಾಡಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮೊದಲು ಉಪ ಕುಲಪತಿಗಳು ಕಂಫರ್ಟ್ ಝೋನ್ನಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಎಲ್ಲ ವಿವಿಗಳ ಉಪ ಕುಲಪತಿಗಳ ಜತೆ ರಾಜ್ಯಪಾಲ ವಜೂಭಾಯಿ ವಾಲ ಅವರು ರಾಜಭವನದಲ್ಲಿ ಬುಧವಾರ ನಡೆಸಿದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಈ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ರಾಜಿ ಇಲ್ಲದ ಬದ್ಧತೆಯನ್ನು ಹೊಂದಿದೆ. ಅದನ್ನು ಅನುಷ್ಟಾನಕ್ಕೆ ತರುವುದಕ್ಕೆ ಅಗತ್ಯವಾದ ಕಾನೂನು ಮತ್ತು ಆಡಳಿತಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಾರಿಗೆ ನೀಲನಕ್ಷೆ ಸಿದ್ಧಪಡಿಸುತ್ತಿರುವ ಕಾರ್ಯಪಡೆ ವರದಿ ನೀಡಿದ ಕೂಡಲೇ ಅನುಷ್ಟಾನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.
ರಾಜ್ಯ ಮಾತ್ರವಲ್ಲ, ಇಡೀ ದೇಶದ ದಿಕ್ಸೂಚಿಯನ್ನೇ ಬದಲಾವಣೆ ಮಾಡಬಲ್ಲ ಶಕ್ತಿ ಹೊಂದಿರುವ ಶಿಕ್ಷಣ ನೀತಿ ಜಾರಿಯಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು. ಉನ್ನತ ಶಿಕ್ಷಣ ಕ್ಷೇತ್ರದ ಸ್ವರೂಪವನ್ನೇ ಬದಲು ಮಾಡಬಲ್ಲ ನೀತಿಯನ್ನು ಜಾರಿ ಮಾಡಲು ನೀವು ಬಹಳಷ್ಟು ಸಿದ್ಧತೆ ಮಾಡಿಕೊಂಡು ಯೋಜನಾಬದ್ಧವಾಗಿ ಮುಂದುವರಿಯಬೇಕಾಗುತ್ತದೆ. ಸಿಬ್ಬಂದಿ ನೇಮಕಾತಿ ಸೇರಿದಂತೆ ವಿವಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ತಯಾರಿದೆ ಎಂದು ಉಪ ಕುಲಪತಿಗಳಿಗೆ ಡಿಸಿಎಂ ಅಶ್ವಥ್ ನಾರಾಯಣ್ ವಿವರಿಸಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನೀತಿಯನ್ನು ಯಾವ ರೀತಿ ಜಾರಿ ಮಾಡಬೇಕು ಎಂಬುದಕ್ಕೆ ಸರಕಾರವೇ ಒಂದು ರೋಡ್ ಮ್ಯಾಪ್ ನೀಡಲಿದೆ. ಆದರ ಆಧಾರದ ಮೇಲೆ ಉಪ ಕುಲಪತಿಗಳು ಕೆಲಸ ಮಾಡಬೇಕು. ಸರಕಾರದಿಂದ ಎಲ್ಲ ರೀತಿಯ ಸಹಕಾರವೂ ಇರುತ್ತದೆ ಎಂದ ಡಿಸಿಎಂ, ಸಂಶೋಧನೆ ಮತ್ತು ಬೋಧನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ವಿವಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ ಬಹ ವಿಷಯಾಧಾರಿತ ಬೋಧನೆ ಮಾಡುವ ನಿಟ್ಟಿನಲ್ಲಿ ಶಕ್ತಿ ತುಂಬಲಾಗುವುದು ಎಂದರು.
ಬೆಂಗಳೂರು ಶಿಕ್ಷಣದ ಹಬ್ ಎಂದ ರಾಜ್ಯಪಾಲರು:
ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ವೇಗವಾಗಿ ದಾಪುಗಾಲು ಇಡುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರುದೇಶದಲ್ಲಿಯೇ ಅತ್ಯಂತ ಪ್ರಮುಖ ಶಿಕ್ಷಣದ ಹಬ್ ಆಗಿ ಹೊರಹೊಮ್ಮುತ್ತಿದೆ. ವೈದ್ಯಕೀಯ, ತಾಂತ್ರಿಕ, ಎಂಜಿನೀಯರಿಂಗ್ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ನಂ. 1 ಆಗಿದೆ. ಶಿಕ್ಷಣ ನೀತಿ ಜಾರಿ ಮಾಡುವುದರಿಂದ ವಿಶ್ವವಿದ್ಯಾಲಯಗಳು ಅತ್ಯುತ್ತಮ ಸಾಧನೆ ಮಾಡಲಿವೆ. ಅದಕ್ಕೆ ಬೇಕಾದ ಸಿಬ್ಬಂದಿಯನ್ನೂ ಸರಕಾರ ಒದಗಿಸುವ ಭರವಸೆ ಇದೆ ಎಂದು ರಾಜ್ಯಪಾಲ ವಜೂಭಾಯಿ ವಾಲ ಇದೇ ವೇಳೆ ಹೇಳಿದರು.
ಕರ್ನಾಟಕವು ಜಾಗತಿಕವಾಗಿ ಶೈಕ್ಷಣಿಕವಾಗಿ ಪೈಪೋಟಿ ನಡೆಸುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಜಾರಿಯನ್ನೇ ಒಂದು ಸವಾಲಾಗಿ ಸ್ವೀಕರಿಸಿ ಉಪ ಕುಲಪತಿಗಳೆಲ್ಲರೂ ಕೆಲಸ ಮಾಡಬೇಕು ಎಂದ ರಾಜ್ಯಪಾಲರು, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಗೋಚರವಾಗಲಿವೆ ಎಂದರು.
ಸ್ವಾಯತ್ತತೆ ಬೇಕೆಂದ ಉಪ ಕುಲಪತಿಗಳು:
ವಿಶ್ವವಿದ್ಯಾಲಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಾಗೂ ಶಿಕ್ಷಣ ನೀತಿಯನ್ನು ಉತ್ತಮವಾಗಿ ಜಾರಿ ಮಾಡಲು ನೆರವಾಗುವ ನಿಟ್ಟಿನಲ್ಲಿ ವಿವಿಗಳಿಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತತೆ ನೀಡಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಉಪ ಕುಲಪತಿಗಳು ತಮ್ಮ ಅಭಿಪ್ರಾಯ ವ್ಕಕ್ತಪಡಿಸಿದರು.
ಜತೆಗೆ, ವಿವಿಗಳನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಬೇಕು. ಗುಣಮಟ್ಟದ ಬೋಧನೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ಸರಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯರು ಆಗಿದ್ದ ಅಜೀಂ ಪ್ರೇಮ್ಜೀ ವಿವಿ ಉಪ ಕುಲಪತಿ ಅನುರಾಗ್ ಬೇಹರ್ ಅವರು ನೀತಿಯ ಕುರಿತು ಎಲ್ಲ ಕಲಪತಿಗಳಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಭೆಯಲ್ಲಿ ವಿಟಿಯು ಉಪ ಕುಲಪತಿ ಪ್ರೊ. ಕರಿಸಿದ್ಧಪ್ಪ ಸೇರಿ ವಿವಿಧ ವಿವಿಗಳ 27 ಉಪ ಕುಲಪತಿಗಳು ಹಾಜರಿದ್ದರು.
Key words: DCM -Ashwath Narayan – leave –university-Deputy- Chancellor- comfort zone.