ಬೆಂಗಳೂರು,ಮಾರ್ಚ್,6,2021(www.justkannada.in): ಸಾಮಾಜಿಕ ಸಮಸ್ಯೆಗಳ ನಿವಾರಣೆ ಹಾಗೂ ಶೈಕ್ಷಣಿಕವಾಗಿ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶನಿವಾರ ಬೆಂಗಳೂರಿನಲ್ಲಿ ಇಬ್ಬರು ಪ್ರಮುಖ ಕ್ರೈಸ್ತ ಧರ್ಮಗುರುಗಳ ಜತೆ ಮಾತುಕತೆ ನಡೆಸಿದರು.
ಭಾರತದ ಕ್ಯಾಥೊಲಿಕ್ ಬಿಷಪ್‌ಗಳ ಸಂಘಟನೆಯ (CCBI) ಉಪ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಫಾದರ್ ಸ್ಟೀಫನ್ ಅಂಥೋನಿ ಪಿಳ್ಳೈ ಹಾಗೂ ನಗರದ ಮಲಂಕಾರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನ ಬಿಷಪ್ ಡಾ.ಅಬ್ರಾಹಂ ಮಾರ್ ಸೆರಫಿಮ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದರು ಉಪ ಮುಖ್ಯಮಂತ್ರಿ.
ಈ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ; “ಫಾದರ್ ಸ್ಟೀಫನ್ ಅಂಥೋನಿ ಪಿಳ್ಳೈ ಅವರು ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅವರೊಂದಿಗೆ ಚರ್ಚಿಸಿದೆ” ಎಂದರು.
ದೇಶದಲ್ಲಿ ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಸುಧಾರಣಾ ಪರ್ವ ಆರಂಭವಾಗಿದೆ. ರಾಜ್ಯದಲ್ಲಿಯೂ ಅಗುತ್ತಿದೆ. ಶಿಕ್ಷಣ, ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ, ಐಟಿ-ಬಿಟಿ, ಕೌಶಲ್ಯಾಭಿವೃದ್ಧಿ, ಉದ್ಯೋಗ ಮುಂತಾದ ಕ್ಷೇತ್ರದಲ್ಲಿ ವೇಗದ ಬೆಳವಣಿಗೆ ಆಗುತ್ತಿದೆ. ಈ ಬಗ್ಗೆ ಇಬ್ಬರು ಫಾದರ್‌ಗಳೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳಲಾಯಿತು. ಅವರು ಹಲವಾರು ಸಲಹೆಗಳನ್ನು ನೀಡಿದರು ಎಂದರು.
ಕೇರಳ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ ಅವರು, ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಧರ್ಮದ ಜನರನ್ನು ಒಳಗೊಳ್ಳುವುದು ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ಭೇಟಿಯ ಉದ್ದೇಶವಾಗಿತ್ತು. ಬಿಜೆಪಿಯದ್ದು ಇದೇ ತತ್ವವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಪ್ರಸಕ್ತ ಬಿಜೆಪಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಕೂಡ ಪಾದರ್‌ಗಳ ಜತೆ ಸಮಾಲೋಚನೆ ನಡೆಸಲಾಯಿತು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಬೆಳವಣಿಗೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು ಎಂದು ಡಾ.ಅಶ್ವತ್ಥನಾರಾಯಣ; ಒಳ್ಳೆಯ ಕೆಲಸ ಯಾರು ಮಾಡಿದರೂ ಶ್ಲಾಘನೆ ಸಿಗುತ್ತದೆ ಎಂಬುದಕ್ಕೆ ಇವತ್ತಿನ ಕ್ರೈಸ್ತ ಧರ್ಮಗುರುಗಳ ಜತೆಗಿನ ನನ್ನ ಭೇಟಿಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಭೇಟಿಗಳಿರುತ್ತವೆ ಎಂದರು.
ತಮ್ಮ ನಿವಾಸಗಳಲ್ಲಿ ಫಾದರ್ ಸ್ಟೀಫನ್ ಅಂಥೋನಿ ಪಿಳ್ಳೈ ಹಾಗೂ ನಗರದ ಮಲಂಕಾರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನ ಬಿಷಪ್ ಡಾ.ಅಬ್ರಾಹಂ ಮಾರ್ ಸೆರಫಿಮ್ ಅವರುಗಳು ಡಿಸಿಎಂ ಆಗಮಿಸಿದಾಗ ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.
key words: DCM -Ashwath Narayan- talks -Christian clergy -development