ತುಮಕೂರು,ಅಕ್ಟೋಬರ್,2020(www.justkannada.in): ಬಿಜೆಪಿ ಎಲ್ಲಾ ಸರ್ವಜನರಿಗೂ ಸಲ್ಲುವ ಪಕ್ಷ. ಬಿಜೆಪಿ ಸರಕಾರ ಸರ್ವಜನರ ಕಲ್ಯಾಣಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಸರಕಾರ. ಹೀಗಾಗಿ ಈ ದೇಶದಲ್ಲಿ ಎಲ್ಲ ಜಾತಿ, ಧರ್ಮಗಳನ್ನು ಪ್ರತಿನಿಧಿಸುವ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಮತ ಹಾಕುವುದು ವ್ಯರ್ಥ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಶಿರಾದಲ್ಲಿ ಉಪ ಚುನಾವಣೆ ಹಿನ್ನೆಲೆ ನಾಯಕ ಸಮುದಾಯ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೆಲವರಿಗೆ ಬಿಜೆಪಿ ಮೇಲೆ ಅಪಪ್ರಚಾರ ಮಾಡುವುದೇ ಚಾಳಿಯಾಗಿದೆ. ಬಿಜೆಪಿ ಎಂದರೆ ಅಭಿವೃದ್ಧಿ. ಬಿಜೆಪಿ ಎಂದರೆ ಸರ್ವ ಸಮಾನತೆ. ಮಹರ್ಷಿ ವಾಲ್ಮೀಕಿ ಅವರ ಪ್ರೇರಣೆಯೊಂದಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಕರ್ನಾಟಕವನ್ನು ನಮ್ಮ ಪಕ್ಷ ಕಟ್ಟುತ್ತಿದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಆರು ತಿಂಗಳಲ್ಲಿ ಶಿರಾ ಚಿತ್ರಣ ಬದಲು….
ಶಿರಾವನ್ನು ಮಾದರಿ ತಾಲ್ಲೂಕು ಮಾಡುವುದು, ಮುದಲೂರು ಕೆರೆ ಸೇರಿ 65 ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಇಡೀ ಶಿರಾವನ್ನು ಶಿಕಾರಿಪುರದಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ಅದರಂತೆಯೇ ಈ ಚುನಾವಣೆ ಮುಗಿದ ಕೂಡಲೇ ಎಲ್ಲ ಅಭಿವೃದ್ಧಿ ಕೆಲಸಗಳು ಆರಂಭವಾಗಲಿವೆ. ಆರು ತಿಂಗಳಲ್ಲಿ ಬದಲಾವಣೆ ಹೇಗಾಗುತ್ತದೆ ಎಂಬುದು ಕ್ಷೇತ್ರದ ಜನರಿಗೆ ಮನವರಿಕೆಯಾಗುತ್ತದೆ. ಇದರಲ್ಲಿ ಅಸತ್ಯವಿಲ್ಲ. ಮುಖ್ಯಮಂತ್ರಿ ಹೇಳಿದ್ದು ನಡೆದೇ ನಡೆಯುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪುನರುಚ್ಚರಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಶಿರಾದಲ್ಲಿ ಏಳು ದಶಕಗಳಲ್ಲಿ ಆಗಿರುವ ಪ್ರಗತಿಯೇನು? ಹೆದ್ದಾರಿಗೆ ಹೊಂದಿಕೊಂಡಿದ್ದರೂ ಇಷ್ಟು ಪ್ರಮಾದಲ್ಲಿ ಶಿರಾ ಹಿಂದುಳಿಯಲು ಕಾರಣವೇನು? ಇದಕ್ಕೆಲ್ಲ ಯಾರು ಹೊಣೆಗಾರರು? ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಜಾತಿಮತಗಳ ಹೆಸರಿನಲ್ಲಿ ಜನರನ್ನು ಒಡೆದುಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ನಾಯಕರಿಗೆ ತಕ್ಕಪಾಠ ಕಲಿಸುವ ಸಂದರ್ಭ ಬಂದಿದೆ. ಮತ್ತೆ ಅದೇ ಪಕ್ಷಗಳಿಗೆ ಮತ ಹಾಕಿ ಸಂವಿದಾನದತ್ತವಾಗಿ ಸಿಕ್ಕಿರುವ ಹಕ್ಕನ್ನು ಪೋಲು ಮಾಡಬಾರದು ಎಂದು ಅಶ್ವಥ್ ನಾರಾಯಣ್ ಜನತೆಯನ್ನು ಕೋರಿದರು.
ಬಿಜೆಪಿ ಗೆದ್ದರೆ ನೀವು ಗೆದ್ದಂತೆ
ಅಭಿವೃದ್ಧಿಯನ್ನೇ ಅಜೆಂಡಾ ಮಾಡಿಕೊಂಡು ಕೆಲಸ ಮಾಡುತ್ತಿರುವ ಬಿಜೆಪಿ ಸರಕಾರದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವೂ ಕಳೆದ ಆರೂವರೆ ವರ್ಷಗಳಲ್ಲಿ ದೇಶವನ್ನು ಹೇಗೆ ಬದಲಾಯಿಸಿತು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ರಾಜ್ಯ ಸರಕಾರವೂ ಇದೇ ಸ್ಫೂರ್ತಿಯೊಂದಿಗೆ ಪ್ರಗತಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಇತರೆ ಪಕ್ಷಗಳಿಗೆ ಇಂಥ ಇಚ್ಛಾಶಕ್ತಿ ಇಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ಸಭೆಯಲ್ಲಿ ಸುರಪುರ ಶಾಸಕ ರಾಜೂ ಗೌಡ, ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಜೆಡಿಎಸ್ಗೆ ಮತ ಹಾಕಿ ಉಪಯೋಗವಿಲ್ಲ:
ಕಾರ್ಯಕ್ರಮಕ್ಕೂ ಮುನ್ನ ಶಿರಾದಲ್ಲೇ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕ್ಷೇತ್ರದಲ್ಲಿ ಪೈಪೋಟಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ. ಕಾಂಗ್ರೆಸ್ ತನ್ನ ಆಂತರಿಕ ಕಚ್ಚಾಟದಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಇನ್ನು ಜೆಡಿಎಸ್ ರಾಜ್ಯದಲ್ಲಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಆ ಪಕ್ಷಕ್ಕೆ ಮತ ಹಾಕುವುದರಿಂದ ಪ್ರಯೋಜನವಿಲ್ಲ ಎಂದರು.
ಬಿಜೆಪಿ ಎಲ್ಲ ಜಾತಿ ಧರ್ಮಕ್ಕೆ ಸಲ್ಲುವ ಪಾರ್ಟಿ. ಹೀಗಾಗಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಇತ್ತೀಚೆಗೆ ನಾನು ನೀಲಕಂಠಾಪುರಕ್ಕೆ ಹೋಗಿ ರಘುವೀರಾ ರೆಡ್ಡಿ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದೆ. ಅವರು ಕೂಡ ನಮ್ಮ ಸರಕಾರದ ವೈಖರಿಯನ್ನು ಮೆಚ್ಚಿದರು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷೇತ್ರದಲ್ಲಿರುವ ಎಲ್ಲರ ವಿಶ್ಬಾಸ ಗಳಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಸಿಎಂ ಅವರ ಆಶ್ವಾಸನೆ ಪ್ರಕಾರ ನೀರು ಕೊಡುವುದನ್ನು ಮಾಡೇ ಮಾಡುತ್ತೇವೆ. ಎಲ್ಲ ಬೇಡಿಕೆಗಳನ್ನು ಈಡೇರಿಸುವ ಶಕ್ತಿ ಆಡಳಿತ ಪಕ್ಷ. ಬಿಜೆಪಿಗೆ ಮಾತ್ರ ಸಾಧ್ಯವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ʼಗೆ ವೋಟ್ ಹಾಕುವುದರಿಂದ ಎನೂ ಪ್ರಯೋಜನ ಇಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡದ ಅವರು ಯಾವ ಮುಖ ಇಟ್ಟುಕೊಂಡು ವೋಟ್ ಕೇಳುತ್ತಿದ್ದಾರೋ ಅರ್ಥವಾಗುತ್ತಿಲ್ಲ. ನೀತಿ ಸಂಹಿತೆ ಮುಗಿದ ನಂತರ ಮದಲುರು ಕೆರೆಗೆ ನೀರು ತುಂಬಿಸುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಭರವಸೆ ನೀಡಿದರು.
Key words: DCM-Ashwath Narayan-waste – vote – Congress – JDS