ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ

ಬೆಳಗಾವಿ, ಏಪ್ರಿಲ್‌ ,28,2025 (www.justkannada.in): ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪುಪಟ್ಟಿ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿಯು ತಮ್ಮ ಕಾರ್ಯಕರ್ತರನ್ನು ಕಳುಹಿಸಿ ಕಪ್ಪು ಬಾವುಟ ಪ್ರದರ್ಶಿಸಿ ಗದ್ದಲ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪ್ರವೃತ್ತಿ ಹೀಗೆ ಮುಂದುವರೆದರೆ ರಾಜ್ಯದಲ್ಲಿ ನೀವು ಒಂದೇ ಒಂದು ಸಭೆ ಮಾಡಲು ನಾವು ಅವಕಾಶ ನೀಡುವುದಿಲ್ಲ.ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಿರಬೇಕು. ನಮ್ಮ ದೇಶದ ಸಂವಿಧಾನ, ಏಕತೆ, ಸಮಗ್ರತೆ, ಶಾಂತಿ ರಕ್ಷಿಸಿಕೊಂಡು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದರು.

ನಾನು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇನೆ. ಪೆಟ್ರೋಲ್, ಡೀಸೆಲ್, ಚಿನ್ನ, ಕಬ್ಬಿಣ, ಸೀಮೆಂಟ್ ಬೆಲೆ ಏರಿಕೆ ಯಾಕೆ ಆಗಿದೆ ಎಂದು ಬಿಜೆಪಿಯವರನ್ನು ಪ್ರಶ್ನಿಸಿ ಎಂದು ಕರೆ ನೀಡಬೇಕಾಗುತ್ತದೆ. ನೀವು ನಮ್ಮ ವಿರುದ್ಧ ಹೋರಾಟ ಮಾಡುವುದಕ್ಕಿಂತ, ನಾವು ನಿಮ್ಮ ವಿರುದ್ಧ ಹೋರಾಟ ಮಾಡಲು ನನಗೆ ಹೆಚ್ಚಿನ ಕಾರ್ಯಕ್ಷಮತೆ ಇದೆ. ಬಿಜೆಪಿ ನಾಯಕರೇ ನೀವು ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ.  ಸರಿ ಮಾಡಿಕೊಂಡರೆ ಸರಿ.  ಇಲ್ಲವಾದರೆ, ಎಲ್ಲಾ ರೀತಿಯ ಪ್ರತಿ ಹೋರಾಟಕ್ಕೆ ನಾವು ಸಿದ್ಧ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: BJP Protest, Congress, Program, DCM, D.K. Shivakumar