ವಿಪಕ್ಷಗಳ ಟೀಕೆಗೆ ತಕ್ಕ ಉತ್ತರ: ಗ್ಯಾರಂಟಿ, ಅಭಿವೃದ್ದಿ ನೋಡಿ ಜನ ಮತ ನೀಡಿದ್ದಾರೆ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ನವೆಂಬರ್,23,2024 (www.justkannada.in): ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ನೋಡಿ ಮೂರು ಕ್ಷೇತ್ರಗಳ ಜನರು ಕಾಂಗ್ರೆಸ್ ಗೆ ಮತ ನೀಡಿ ಗೆಲ್ಲಿಸಿದ್ದಾರೆ. ಈ ಮೂಲಕ ವಿಪಕ್ಷಗಳ  ಟೀಕೆ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನುಡಿದರು.

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಡಿಸಿಎಂ ಡಿಕೆ ಶಿವಕುಮಾರ್, ಉಪಚುನಾವಣಾ ಫಲಿತಾಂಶ ಮುಂದಿನ 2028ರ ಚುನಾವಣೆಗೆ ದಿಕ್ಸೂಚಿ. 2028ರ ಚುನಾವಣೆಗೆ ಜನರು ಮುನ್ನುಡಿ ಬರೆಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಜನರು ಮುನ್ನುಡಿ ಬರೆದಿದ್ದಾರೆ. ಸುಳ್ಳೇ ಕಾಂಗ್ರೆಸ್ ಮನೆ ದೇವರು ಎಂದು ಬಿಜೆಪಿ ಜೆಡಿಎಸ್ ನಾಯಕರು ಟೀಕಿಸಿದ್ದರು. ಅದಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು.

ಟೀಕೆ ಸಾಯುತ್ತದೆ ಕೆಲಸ ಉಳಿಯುತ್ತದೆ ಅಂತ ನಾನು ಈ ಮೊದಲೇ ಹೇಳಿದ್ದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ. ಜನರ ಭಾವನೆಯ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡಬೇಕು ಹಾಗಾಗಿ ಜನ ಆಶೀರ್ವದಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಕುರಿತಂತೆ ವಿಪಕ್ಷಗಳು ಅಪಪ್ರಚಾರ ಮಾಡಿದರು. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿಗೆ ಹಣ ಇಲ್ಲ ಅಂತ ಆರೋಪಿಸಿದ್ದರು ಆದರೆ ಈಗ ಒಂದೇ ಕ್ಷೇತ್ರಕ್ಕೆ ಕೋಟಿ ಕೋಟಿ ಹಣ ಹೋಗುತ್ತಿದೆ  ಎಂದರು.

ಸಮೀಕ್ಷೆಗಳು ಸುಳ್ಳಾಗುತ್ತವೆ ಅಂತ ನಾನು ನಿನ್ನೆ ಸಂಜೆಯೇ ಹೇಳಿದ್ದೆ. ನಾವು ಮಾಡುವ ಸಮೀಕ್ಷೆಯೇ ಬೇರೆ ಅಂತ ಹೇಳಿದ್ದೆ. ಬಿಜೆಪಿ ಜೆಡಿಎಸ್ ಮೈತ್ರಿಯಾದರೂ ನಮಗೆ ಗೆಲುವು ಸಿಕ್ಕಿದೆ. ಹೆಚ್ ಡಿಕೆ ಮಂಡ್ಯ ಕ್ಷೇತ್ರ  ಎಂ.ಪಿ.  ಎರಡು ಬಾರಿ ಸಿಎಂ ಆಗಿದ್ದವರು.  ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಕುರುಹುಗಳಿಗೆ ಜನ ಉತ್ತರ ನೀಡಿದ್ದಾರೆ. ಶಿಗ್ಗಾಂವಿ, ಸಂಡೂರಿನಲ್ಲಿ ಗೆದ್ದಿದ್ದೇವೆ ಎಂದು ಡಿಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿದರು.

Key words: People, voted, guarantees, development, DCM DK Shivakumar