ಬೆಂಗಳೂರು, ಜನವರಿ, 27,2025 (www.justkannada.in): ರಾಜಕೀಯ ಪಿತೂರಿಯಿಂದ ಸಿಎಂ ಪತ್ನಿ ಪಾರ್ವತಿ ಅವರಿಗೆ, ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ಸಂಸ್ಥೆ ನೋಟಿಸ್ ನೀಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಕುರಿತು ಸದಾಶಿವನಗರ ನಿವಾಸದ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನನ್ನ ವಿರುದ್ಧದ ಪ್ರಕರಣದಲ್ಲೂ ಹೀಗೆ ಆಗಿತ್ತು. ಒಂದು ಪ್ರಕರಣವನ್ನು ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿಲ್ಲ. ಲೋಕಾಯುಕ್ತ ಸಂಸ್ಥೆ ಈಗಾಗಲೇ ತನಿಖೆ ಮಾಡುತ್ತಿದೆ. ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗ ಬೇರೆ ಸಂಸ್ಥೆಗಳು ತನಿಖೆ ನಡೆಸಲು ಆಗುವುದಿಲ್ಲ ಎಂದು ನ್ಯಾಯಾಲಯಗಳು ಅನೇಕ ತೀರ್ಪು ನೀಡಿವೆ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದ ನಂತರ ನಾನು ಮಾತನಾಡುತ್ತೇನೆ” ಎಂದು ತಿಳಿಸಿದರು.
ಮುಡಾ ಪ್ರಕರಣ ಸಿಬಿಐ ತನಿಖೆ ನೀಡಬೇಕು ಎಂಬ ವಿಚಾರವಾಗಿ ಕೇಳಿದಾಗ, “ನನ್ನ ಪ್ರಕರಣದಲ್ಲೂ ಸಿಬಿಐ ಹಾಗೂ ಇಡಿ ಒಟ್ಟಿಗೆ ತನಿಖೆ ಮಾಡುತ್ತಿದ್ದವು. ಯಾವುದೇ ಸಂಸ್ಥೆಗಳಾಗಲಿ ಒಟ್ಟಿಗೆ ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ಮಾಡುವಂತಿಲ್ಲ. ಈ ಕುರಿತಾಗಿ ಬಂದಿರುವ ನ್ಯಾಯಾಲಯದ ತೀರ್ಪುಗಳನ್ನು ನನ್ನ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಪ್ರಸ್ತಾಪ ಮಾಡಿದ್ದೇನೆ” ಎಂದು ತಿಳಿಸಿದರು.
ಸರ್ಕಾರ ಸುಭದ್ರ
ಸಿಎಂ ಹುದ್ದೆ ವಿಚಾರವಾಗಿ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಆ ರೀತಿಯಾಗಿ ಯಾರೂ ಏನೂ ಮಾತನಾಡಿಲ್ಲ. ಸರ್ಕಾರ ಸುಭದ್ರವಾಗಿದೆ. ನಾವೆಲ್ಲರೂ ಸಿಎಂ ಅವರ ಕೆಳಗೆ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
Key words: ED, notice, DCM, DK Shivakumar, political conspiracy