ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಕಮಿಷನ್ ಕೇಳಿದ್ರೆ ಲೋಕಾಯುಕ್ತರಿಗೆ ದೂರು ನೀಡಲಿ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಏಪ್ರಿಲ್,11,2025 (www.justkannada.in):  ಬಾಕಿ ಬಿಲ್ ಪಾವತಿ ಮಾಡಲು ಕಮಿಷನ್ ಕೇಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಇಬ್ಬರು ಸಚಿವರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತರಿಗೆ ದೂರು ನೀಡಲಿ ಎಂದು ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್,   ಬಿಲ್ ಪಾವತಿ ವಿಚಾರವಾಗಿ ಯಾರಾದರೂ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಯಾಕೆ ಸಚಿವರನ್ನು ಕೇಳಬೇಕು. ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಅವರು ಇದರಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಒಂದು ವರ್ಷ ಮುಂಚಿತವಾಗಿಯೇ ನಾವು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆವು. ಅನುದಾನ ಇಲ್ಲದೆ ಯಾವುದೇ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ನಮ್ಮ ಮಾತು ಕೇಳದೆ ಈಗ ರಾಜಕೀಯ ನಾಯಕರ ಮೂಲಕ ಬಿಲ್ ಪಾವತಿಗೆ ಮನವಿ ಪತ್ರ ನೀಡುತ್ತಿದ್ದಾರೆ’ ಎಂದು ಡಿಕೆ ಶಿವಕುಮಾರ್ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,   ಜಾತಿಗಣತಿ ವರದಿ ಕ್ಯಾಬಿನೆಟ್ ನಲ್ಲಿ ಜಸ್ಟ್ ಓಪನ್ ಮಾಡಲಾಗಿದೆ. ವರದಿಯನ್ನು ಇನ್ನೂ ಯಾರೂ ನೋಡಿಲ್ಲ.  ಮುಂದೆ ಎಲ್ಲರಿಗೂ ಕೊಡ್ತಾರೆ. ಈ ಬಗ್ಗೆ ಕುಳಿತು ಪ್ರತ್ಯೇಕ ಚರ್ಚೆ ಮಾಡುತ್ತೇವೆ. ನಾವು ಆ ರೀತಿಯ ತೀರ್ಮಾನ ಮಾಡೋಕೆ ಆಗಲ್ಲ ಎಂದರು.

Key words: commission, complain, contractors, Lokayukta,  DCM, DK Sivakumar