ಬೆಂಗಳೂರು,ಮೇ,18,2021(www.justkannada.in): ದೇಶದ ನಾಲ್ಕು ಕಡೆಗಳಲ್ಲಿ ಕೇಂದ್ರದ ರಕ್ಷಣಾ ಇಲಾಖೆಯ ಡಿ. ಆರ್. ಡಿ. ಒ. ವತಿಯಿಂದ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆದಂಥ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಕೂಡ ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ರಕ್ಷಣಾ ಇಲಾಖೆಯಿಂದ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಕೇಂದ್ರದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಡಿಸಿಎಂ ಲಕ್ಷ್ಮಣ್ ಸವದಿ, ದೆಹಲಿ, ವಾರಣಾಸಿ, ಅಹಮದಾಬಾದ್, ಮತ್ತು ಲಖನೋಗಳಲ್ಲಿ ಡಿ.ಆರ್. ಡಿ. ಒ. ವತಿಯಿಂದ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸುವುದಕ್ಕೆ ಕೇಂದ್ರದ ರಕ್ಷಣಾ ಸಚಿವರನ್ನು ಅಭಿನಂದಿಸಿದ್ದಾರೆ.
ಕರ್ನಾಟಕದಲ್ಲಿಯೂ ಪ್ರಸ್ತುತ ಕೋವಿಡ್ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಿರುವುದರಿಂದ ಇಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಅಧಿಕವಾಗಿದೆ. ವೈದ್ಯರುಗಳ ಮೇಲೆ ಒತ್ತಡವೂ ತೀವ್ರವಾಗಿದೆ. ಆದ್ದರಿಂದ ಕರ್ನಾಟಕದಲ್ಲಿಯೂ ಆದಷ್ಟು ಶೀಘ್ರವಾಗಿ ಸುಸಜ್ಜಿತ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸುವುದು ಸೂಕ್ತ.
ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕೇಂದ್ರದ ರಕ್ಷಣಾ ಇಲಾಖೆಯ ಸ್ವಾಮ್ಯದಲ್ಲಿ ಸಾಕಷ್ಟು ಖಾಲಿ ಜಾಗಗಳೂ ಈಗ ಲಭ್ಯವಿದೆ. ಇದನ್ನು ಬಳಕೆ ಮಾಡಿಕೊಂಡು ರಕ್ಷಣಾ ಇಲಾಖೆಯಿಂದ ತಕ್ಷಣವೇ ಕೋವಿಡ್ ಕೇಂದ್ರಗಳನ್ನು ಪ್ರಾರಂಭಿಸಿದರೆ ಸಾಕಷ್ಟು ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಕೈಗೊಳ್ಳಬೇಕೆಂದು ಡಿಸಿಎಂ ಲಕ್ಷ್ಮಣ್ ಸವದಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋರಿದ್ದಾರೆ.
Key words: DCM –Lakshman Sawadi – letter-Union Defense Minister – start- covid Center – DRDO.