ಮೈಸೂರು,ಆಗಸ್ಟ್,22,2024 (www.justkannada.in): ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಎಚ್.ಡಿ ಕೋಟೆಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಜಕ್ಕಳ್ಳಿ ದೇವಲಾಪುರ ಗ್ರಾಮದ ಗೀತ (23) ಮೃತಪಟ್ಟ ಗರ್ಭಿಣಿ ಮಹಿಳೆ. ಮೃತ ದೇಹ ನೀಡಲು ಆಸ್ಪತ್ರೆ ಸಿಬ್ಬಂದಿ ವಿಳಂಬ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೋಷಕರು, ಸಾರ್ವಜನಿಕರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಹೆರಿಗೆ ನೋವಿನಿಂದ ಗೀತಾ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ಕೆಲವೊತ್ತಿಗೆ ಮಗು ಹೊಟ್ಟೆಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ಪೋಷಕರ ವಿರೋಧದ ನಡುವೆಯೂ ಮರಣೋತ್ತರ ಪರೀಕ್ಷೆಗೆ ವೈದ್ಯರು ಮುಂದಾಗಿದ್ದು, ಮುಂಜಾನೆ ಮೃತಪಟ್ಟು ಮಧ್ಯಾಹ್ನ ಕಳೆದರೂ ಮೃತದೇಹವನ್ನ ವಾರಸುದಾರರಿಗೆ ನೀಡದೆ ವಿಳಂಬ ಮಾಡಿದ್ದಾರೆ.
ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಡೆಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು ಆಸ್ಪತ್ರೆ ಆಡಳಿತಾಧಿಕಾರಿ ಜೊತೆ ಮಾತಿನ ಚಕಮಕಿ ನಡೆಸಿದರು. ಕೊನೆಗೆ ತಹಶೀಲ್ದಾರ್ ಶ್ರೀನಿವಾಸ್ ಸ್ಥಳಕ್ಕಾಗಮಿಸಿದ್ದು, ಮರಣೋತ್ತರ ಪರೀಕ್ಷೆ ಮೈಸೂರಿನಲ್ಲಿ ನಡೆಸಲು ವೈದ್ಯರು ನಿರ್ಧರಿಸಿದರು. ಆದರೆ ಹೆಚ್ ಡಿ ಕೋಟೆಯಲ್ಲೆ ಮರಣೋತ್ತರ ಪರೀಕ್ಷೆ ನೆರವೇರಿಸಿ ಮೈಸೂರಿಗೆ ಮೃತದೇಹ ಹೊಯ್ಯಲು ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಅಂತಿಮವಾಗಿ ಮೃತಳ ತಾಯಿಯು ಹೆಚ್.ಡಿ ಕೋಟೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸುವಂತೆ ಲಿಖಿತ ಮನವಿ ಸಲ್ಲಿಸಿದರು. ಲಿಖಿತ ಮನವಿ ಪಡೆದು ವೈದ್ಯರು ಮರಣೋತ್ತರ ಪರೀಕ್ಷೆ ನೆರವೇರಿಸಿದರು.
Key words: Death, pregnant woman, hospital, mysore