ಬೆಂಗಳೂರು,ಆಗಸ್ಟ್,28,2020(www.justkannada.in): ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಸಂಘಟಕ, ನಾಡೋಜ ದೇಶಹಳ್ಳಿ ಜಿ.ನಾರಾಯಣ ಅವರ ಹೆಸರಿಡಲು ಬಿಬಿಎಂಪಿ ತೀರ್ಮಾನ ಮಾಡಿದೆ.
ಬೆಂಗಳೂರು ಇತಿಹಾಸ ಪ್ರಸಿದ್ಧ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಜಿ.ನಾರಾಯಣ ಅವರ ಹೆಸರು ನಾಮಕರಣಕ್ಕೆ ಬಿಬಿಎಂಪಿ ಒಲವು ತೋರಿದೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಸದಸ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ.
ಮಾಜಿ ಮೇಯರ್ ಜಿ.ನಾರಾಯಣ ಅವರ ಕುರಿತು….
ಜಿ.ನಾರಾಯಣ ಅವರು ಒಬ್ಬ ಸಾಮಾನ್ಯ ಹಳ್ಳಿ ರೈತನ ಮಗ. ಇವರು ಶಿವಪುರ ಧ್ವಜ ಸತ್ಯಾಗ್ರಹ ಚಳುವಳಿಯಲ್ಲಿ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು, ಅನೇಕ ಹಿರಿಯ ಸ್ವಾತಂತ್ರ್ಯ ಚಳುವಳಿ ಗಾರರ ಮಾರ್ಗದರ್ಶನ ಪಡೆದು ಸಿದ್ದಲಿಂಗಯ್ಯ, ಕೆಟಿ ಭಾಷ್ಯಂ, ಕೆಂಗಲ್ ಹನುಮಂತಯ್ಯ ,ಬಳ್ಳಾರಿ ಸಿದ್ದಮ್ಮ, ಯಶೋಧರ ದಾಸಪ್ಪ ಮುಂತಾದ ಅನೇಕ ಮಹನೀಯರ ಸಂಸರ್ಗದಿಂದ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ತಮ್ಮ ಬದುಕನ್ನು ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿ ದೇಶಸೇವೆ ಮಾಡಿದವರು.
ಜಿ.ನಾರಾಯಣ ಅವರು ಬೆಂಗಳೂರಿನ ಮೇಯರ್ ಆಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇಂದಿನ ಕಾರ್ಪೊರೇಷನ್ ಕಟ್ಟಡದ ಎದುರು ನಿಲ್ಲಿಸಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದವರು. ಬೆಂಗಳೂರು ಮಹಾನಗರಕ್ಕೆ ಕಾವೇರಿ ನೀರು ಸರಬರಾಜು ಯೋಜನೆ ಮಾಡಿಸಿದವರು. ನಂತರ ವಿನೋದ ಪತ್ರಿಕೆಯನ್ನು ಪ್ರಾರಂಭಗೊಳಿಸಿ ನಿರಂತರವಾಗಿ ನಡೆಸಿಕೊಂಡ ಬಂದು ಒಂದು ಸಾಧನೆ ಅಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 9 ವರ್ಷಗಳ ಕಾಲ ದುಡಿದು ಮಹಾಕವಿ ಕುವೆಂಪುರವರಿಂದ ಸಾಹಿತ್ಯ ಪರಿಷತ್ತಿನ ಪಾಲಿನ ಶ್ರೀಮನ್ನಾರಾಯಣ ಎಂದು ಕರೆಸಿಕೊಂಡಿದ್ದರು.
ನಮ್ಮ ಜಾನಪದ ಪರಿಷತ್ತು ಹುಟ್ಟಲು ಬೆಳೆಯಲು ಇವರ ಸೇವೆ ಸಿಕ್ಕಿದೆ. ಈ ರೀತಿ ನಾಡು ನುಡಿ ಗಡಿ ಜಲ ಸಂಸ್ಕೃತಿ ಜಾನಪದ ಹೀಗೆ ಪತ್ರಿಕೋದ್ಯಮ ಮುಂತಾದ ಕ್ಷೇತ್ರಗಳ ಸೇವೆ ಪರಿಗಣಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ.
Key words: decides – Bangalore-Kalasipalya -bus stop- – name -G Narayana